ಆ.10 ರ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಎಲ್ಲ ಶಾಲೆ, ಕಾಲೇಜುಗಳು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಜಂತುಹುಳು ನಾಶಕ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು 1 ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಜಂಟುಹುಳು ನಿವಾರಣಾ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಂತುಹುಳು ಸೋಂಕಿನಿಂದಾಗಿ ಮಕ್ಕಳು ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ಹಸಿವಾಗದಿರುವುದು, ನಿಶಕ್ತಿ, ಏಕಾಗ್ರತೆ ಕೊರತೆ, ಆತಂಕ, ಹೊಟ್ಟೆನೋವು, ವಾಕರಿಕೆ, ವಾಂತಿ, ಅತಿಸಾರ ಮುಂತಾದ ಅಪಾಯಕಾರಿ ಸಮಸ್ಯೆಗಳಿಂದ ಬಳಲುತ್ತಾರೆ.
ಈ ಸಮಸ್ಯೆಗಳನ್ನು ನಿವಾರಿಸುವ ಉದ್ದೇಶದಿಂದ ಆಗಸ್ಟ್ 10 ರಂದು ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಆಚರಿಸಲಾಗುತ್ತಿದ್ದು, ಅಂದು ಎಲ್ಲ ಮಕ್ಕಳಿಗೆ ಉಚಿತವಾಗಿ ಅಲ್ಬೆಂಡಝೋಲ್ ಮಾತ್ರೆಗಳನ್ನು ಕೊಡಲಾಗುವುದು. ಅಂದು ಕೊಡದೇ ಬಾಕಿ ಇರುವ ಮಕ್ಕಳಿಗೆ ಆ.17 ರಂದು ನೀಡಲಾಗುವುದು. ಅಂದು ಕೂಡ ಶೇ.100 ಪ್ರಗತಿ ಸಾಧಿಸದಿದ್ದರೆ ಮತ್ತೊಂದು ದಿನ ನಿಗದಿಪಡಿಸಲಾಗುವುದು. ಜಂತುಹುಳು ನಾಶಕ ಮಾತ್ರೆ ನೀಡುವಲ್ಲಿ ಶೇ.100 ಪ್ರಗತಿ ಸಾಧಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಆರ್‍ಸಿಹೆಚ್‍ಓ ಡಾ.ನಾಗರಾಜನಾಯ್ಕ ಮಾತನಾಡಿ, ಜಂತುಹುಳು ನಿವಾರಣೆಯಿಂದ ರಕ್ತಹೀನತೆಯನ್ನು ನಿವಾರಿಸಬಹುದು. ಏಕಾಗ್ರತೆ, ಕಲಿಕಾ ಸಾಮಥ್ರ್ಯ ಹೆಚ್ಚುವುದರೊಂದಿಗೆ ಪರಿಸರದಲ್ಲಿ ಜಂತುಹುಳು ಕಡಿಮೆ ಮಾಡುವ ಮೂಲಕ ಸಮುದಾಯಕ್ಕೆ ಪ್ರಯೋಜನವಾಗುತ್ತದೆ, ಈ ನಿಟ್ಟಿನಲ್ಲಿ ಅರಿವು ಮೂಡಿಸಲು ಎಲ್ಲರೂ ಸಹಕರಿಸಬೇಕು.
1 ರಿಂದ 2 ವರ್ಷದ ಮಕ್ಕಳಿಗೆ ಅರ್ಧ ಮತ್ತು 19 ವರ್ಷದವರೆಗಿನ ಮಕ್ಕಳಿಗೆ ಒಂದು ಜಂತುಹುಳು ನಾಶಕ ಮಾತ್ರೆಯನ್ನು ಜಗಿಯಲು ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 5,50,000 ಮಕ್ಕಳಿಗೆ ಮಾತ್ರೆ ನೀಡುವ ಗುರಿ ನೀಡಲಾಗಿದೆ. ಶಾಲಾ-ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಆ.10 ರಂದು ಮಾತ್ರೆಗಳನ್ನು ನೀಡಲಾಗುವುದು. ಅಂದು ಕೊಡದೇ ಬಾಕಿ ಇರುವ ಮಕ್ಕಳಿಗೆ ಆ.17 ರಂದು ನೀಡಲಾಗುವುದು ಎಂದು ತಿಳಿಸಿದರು.
ಜಿ.ಪಂ ಸಿಇಓ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಡಿಹೆಚ್‍ಓ ಡಾ.ರಾಜೇಶ್ ಸುರಗಿಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟಿಲ್, ಎಲ್ಲ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ, ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.