ಹೊನ್ನಾಳಿ:
ತಾಲೂಕಿನಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಸುರಿದ ಭಾರೀ ಮಳೆಯಿಂದಾಗಿ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಅಡಕೆ-ತೆಂಗಿನ ತೋಟಗಳಿಗೂ ಮಳೆ ನೀರು ನುಗ್ಗಿದ್ದು, ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳ ರಸ್ತೆಗಳೂ ನದಿ-ಕೆರೆಗಳಂತಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕಂಡು-ಕೇಳರಿಯದಷ್ಟು ಮಳೆ ಸುರಿದಿದೆ ಎಂದು ಜನರು ಅಚ್ಚರಿ ವ್ಯಕ್ತಪಡಿಸುತ್ತಾರೆ.
ಕಳೆದ ವಾರದವರೆಗೆ ಸುರಿದ ಭಾರೀ ಮಳೆ ಎರಡು ಮೂರು ದಿನಗಳ ಕಾಲ ಬಿಡುವು ನೀಡಿತ್ತು. ಬಿಸಿಲಿನ ವಾತಾವರಣದಿಂದಾಗಿ ಬೆಳೆಗಳು ಚೇತರಿಸಿಕೊಳ್ಳುತ್ತಿದ್ದವು. ಆದರೆ, ಇದೀಗ ಸುರಿದ ಮಳೆಯಿಂದಾಗಿ ಎಲ್ಲಾ ಬೆಳೆಗಳು ನೆಲಕಚ್ಚುವಂತಾಗಿದೆ.
ಮೊದಲ ಹಂತದಲ್ಲಿ ಬಿತ್ತನೆ ಮಾಡಲಾಗಿದ್ದ ಮೆಕ್ಕೆಜೋಳದ ಬೆಳೆ ಅಳಿಸಿ ಮರು ಬಿತ್ತನೆ ಮಾಡಲಾಗಿತ್ತು. ಇದೀಗ ಸುರಿದ ಮಳೆಗೆ ಅದೂ ನಾಶವಾಗಿದೆ. ಬಿತ್ತನೆ ಬೀಜ-ಗೊಬ್ಬರ ಇತ್ಯಾದಿ ಪರಿಕರಗಳನ್ನು ಸಾಲ ಮಾಡಿ ಖರೀದಿಸಿದ್ದ ರೈತರು ಕಂಗಾಲಾಗಿದ್ದಾರೆ. ಫಸಲ್ ಬೀಮಾ ಯೋಜನೆಯಡಿ ನೆರವು ದೊರೆತರಷ್ಟೇ ರೈತರು ಉಸಿರಾಡಬಹುದು ಎನ್ನುತ್ತಾರೆ ತಾಲೂಕು ರೈತ ಸಂಘ-ಹಸಿರು ಸೇನೆ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್.
ಇದೇ ರೀತಿ, ಇತರ ಬೆಳೆಗಳೂ ವಿನಾಶದ ಅಂಚಿನಲ್ಲಿವೆ. ಸೂರ್ಯಕಾಂತಿ, ಹತ್ತಿ, ಹೆಸರು, ಅಲಸಂದೆ, ಶೇಂಗಾ ಮತ್ತಿತರ ಬೆಳೆಗಳು ಶೀತ ಬಾಧೆಯಿಂದ ನರಳುತ್ತಿವೆ.
ತಾಲೂಕಿನ ಕೋಟೆಮಲ್ಲೂರು, ಬೇಲಿಮಲ್ಲೂರು, ಹನುಮಸಾಗರ, ದಿಡಗೂರು, ಬಿದರಗಡ್ಡೆ, ಕೂಲಂಬಿ-ಕುಂದೂರು, ಮಲೆಕುಂಬಳೂರು, ನೆಲಹೊನ್ನೆ ಇತರ ಗ್ರಾಮಗಳಲ್ಲಿನ ಅಡಕೆ-ತೆಂಗಿನ ತೋಟಗಳಿಗೆ ಅಪಾರ ಪ್ರಮಾಣದ ಮಳೆ ನೀರು ನುಗ್ಗಿದ್ದು, ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮದ ಭೀತಿ ಎದುರಾಗಿದೆ ಎನ್ನುತ್ತಾರೆ ಕೋಟೆಮಲ್ಲೂರು ಬಿ.ಜಿ. ಶಿವಮೂರ್ತಿಗೌಡ್ರು.
ತಾಲೂಕಿನ ಯಕ್ಕನಹಳ್ಳಿ ಗ್ರಾಮದ ರೈತ ಸಣ್ಣಗೌಡ್ರ ಮಲ್ಲಿಕಾರ್ಜುನ್ ಎಂಬುವವರ ಗದ್ದೆಯಲ್ಲಿನ ಭತ್ತದ ನಾಟಿಗೆ ಸಿದ್ಧವಾಗಿದ್ದ ಸಸಿ ಮಡಿಗಳನ್ನು ಮಳೆ ನೀರು ಕೊಚ್ಚಿಕೊಂಡು ಹೋಗಿದ್ದು, ಕಂಗಾಲಾಗಿದ್ದಾರೆ. ಇದೀಗ, ಮತ್ತೆ ಸಸಿ ಮಡಿ ಬೆಳೆಸಲು ಹೆಚ್ಚಿನ ಸಮಯ ತಗುಲುತ್ತದೆ ಎನ್ನುತ್ತಾರೆ ಯಕ್ಕನಹಳ್ಳಿ ಗ್ರಾಮದ ರೈತ ಬಿ.ಎಂ. ರಾಮಾಂಜನೇಯ.

Leave a Reply

Your email address will not be published. Required fields are marked *