ಹೊನ್ನಾಳಿ : ನಾನು 24/7 ಕೆಲಸ ಮಾಡುತ್ತಿದ್ದು, ನನ್ನ ವೇಗಕ್ಕೆ ತಕ್ಕಂತೆ ಅವಳಿ ತಾಲೂಕಿನ ಅಧಿಕಾರಿಗಳು ಕೆಲಸ ಮಾಡ ಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸೋಮವಾರ ಸುರಿದ ಬಾರಿ ಮಳೆಗೆ ಹೊನ್ನಾಳಿ ನ್ಯಾಮತಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕೊಚ್ಚಿ ಹೋಗಿದ್ದು, ರಸ್ತೆ ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿದ್ದು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಶಿವಮೊಗ್ಗ ನ್ಯಾಮತಿ ದಾವಣಗೆರೆ ಸಂಪರ್ಕಿಸುವ ರಾಜ್ಯ ಹೆದ್ದಾರಿ ದಾನಿಹಳ್ಳಿ ಬಳಿ ಸೋಮವಾರ ಸುರಿದ ಬಾರೀ ಮಳೆಗೆ ಕೊಚ್ಚಿ ಹೋಗಿದ್ದು, ವಾಹನ ಸವಾರರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೇ ಎಂದ ಶಾಸಕರು ರಸ್ತೆ ದುರಸ್ಥಿ ಕಾಮಗಾರಿ ಪ್ರಗತಿಯಲ್ಲಿದ್ದು ಶನಿವಾರ ರಾತ್ರಿ ಒಳಗಾಗೀ ರಸ್ತೆ ದುರಸ್ಥಿ ಕಾಮಗಾರಿ ಪೂರ್ಣಗೊಳಿಸಿ ಭಾನುವಾರದಿಂದ ವಾಹನ ಓಡಾಟಕ್ಕೆ ಮುಕ್ತಗೊಳಿಸುವಂತೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಹೊನ್ನಾಳಿ ಹಾಗೂ ರಾಣೇಬೆನ್ನೂರು ಸಂಪರ್ಕಿಸುವ ರಸ್ತೆ ಹನುಮಸಾಗರ ತಾಂಡದ ಬಳಿ ಕೊಚ್ಚಿ ಹೋಗಿದ್ದು ಈಗಾಗಲೇ ದುರಸ್ಥಿ ಮಾಡಿಸಲಾಗಿದೆ ಎಂದ ಶಾಸಕರು, ಗಂಗನಕೋಟೆ ಬಳಿ ಸೇತುವೆಗೆ ಹಾನಿಯಾಗಿದ್ದು ಕೂಡಲೇ ದುರಸ್ಥಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಸುರಿದ ಬಾರೀ ಮಳೆಯಿಂದಾಗಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ 25 ಸಾವಿರ ಎಕರೆಗೆ ಹೆಚ್ಚು ಕೃಷಿ ಬೆಳೆಗಳು, ಎರಡು ಸಾವಿರಕ್ಕೂ ಹೆಚ್ಚು ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದರೇ, ಅವಳಿ ತಾಲೂಕಿನಾಧ್ಯಂತ ರಸ್ತೆಗಳು, ಕೆರೆಕಟ್ಟೆಗಳು, ನಾಲೆಗಳು,ಶಾಲಾಕಟ್ಟಡಗಳು,ಮನೆಗಳು ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದೆ ಎಂದರು. ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಮಳೆಯಿಂದಾಗಿ ಬಾರೀ ಅನಾಹುತ ಉಂಟಾಗಿದ್ದು, ಈಗಾಗಲೇ ಸಿಎಂ ಅವರನ್ನು ಭೇಟಿ ಮಾಡಿ ಅವಳಿ ತಾಲೂಕನ್ನು ಅತಿವೃಷ್ಟಿ ಪೀಡಿತ ತಾಲೂಕು ಎಂದು ಘೋಷಣೆ ಮಾಡುವ ಮೂಲಕ ಅವಳಿ ತಾಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದು, ಸಿಎಂ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆಂದ ಶಾಸಕರು, ಅಧಿಕಾರಿಗಳು ಸೋಮವಾರದ ಒಳಗೆ ಸಮಗ್ರ ವರದಿ ಸಿದ್ದಪಡಿಸುವಂತೆ ಸೂಚನೆ ನೀಡಿದ್ದೇನೆ ಎಂದರು.
ಶನಿವಾರದಿಂದ ಸೋಮವಾರದವರೆಗೂ ಅವಳಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ಹೇಳಿದ ಶಾಸಕರು, ಅಧಿಕಾರಿಗಳು ರಜೆ ಮೇಲೆ ತೆರಳದೇ ಮಳೆ ಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿಯ ಸಮಗ್ರ ವರದಿ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದೇನೆ ಎಂದರು.
ಈ ಸಂದರ್ಭ ಓಬಿಸಿ ಮೋರ್ಚ ತಾಲೂಕು ಅಧ್ಯಕ್ಷ ರಾಕೇಶ್, ಮುಖಂಡರಾದ ನರಸಿಂಹಪ್ಪ,ಇಂಚರ ನವೀನ್ ಸೇರಿದಂತೆ ಮತ್ತೀತರರಿದ್ದರು.