ಹೊನ್ನಾಳಿ:
ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಸಮಾಜ ಕೈಜೋಡಿಸಬೇಕು ಎಂದು ತಾಲೂಕು ಎಸ್ಡಿಎಂಸಿ ಒಕ್ಕೂಟದ ಅಧ್ಯಕ್ಷ ಹುಣಸಘಟ್ಟ ಎ.ಎಸ್. ಶಿವಲಿಂಗಪ್ಪ ಹೇಳಿದರು.
ಬೆಂಗಳೂರಿನ ಸರಕಾರೇತರ ಸ್ವಯಂ ಸೇವಾ ಸಂಸ್ಥೆ ಒಸಾಟ್ ವತಿಯಿಂದ ತಾಲೂಕಿನ ಅರಬಗಟ್ಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ 50 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ನಾಲ್ಕು ಶಾಲಾ ಕೊಠಡಿಗಳು, ಹೈಟೆಕ್ ಶೌಚಾಲಯ ಕಟ್ಟಡಗಳನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳ ಬಲವರ್ಧನೆಗೆ ನಾವೆಲ್ಲರೂ ಕೈಜೋಡಿಸಬೇಕು. ಗ್ರಾಮೀಣ ಭಾಗಗಳ ಶಾಲೆಗಳ ಅಭಿವೃದ್ಧಿಯಾದರೆ ಬಡ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಲಭಿಸುತ್ತದೆ ಎಂದು ತಿಳಿಸಿದರು.
ವನಯಾತ್ರಿ ಸಂಸ್ಥೆಯೊಂದಿಗೆ ಅಮೆರಿಕ ಮೂಲದ ಒಸಾಟ್ ಸಂಸ್ಥೆಯ ಬೆಂಗಳೂರು ಶಾಖೆ ಸರಕಾರಿ ಶಾಲೆಗಳ ಬಲವರ್ಧನೆಗೆ ಮುಂದಾಗಿದೆ. ಹೊನ್ನಾಳಿ ತಾಲೂಕಿನಲ್ಲಿ ಒಸಾಟ್ ಸಂಸ್ಥೆ ಈಗಾಗಲೇ ಎರಡು ಶಾಲೆಗಳನ್ನು ಅಭಿವೃದ್ಧಿಪಡಿಸಿದೆ. ಒಸಾಟ್ ಸಂಸ್ಥೆಯ ಕಾರ್ಯವೈಖರಿ ಅನನ್ಯವಾಗಿದ್ದು, ಸೇವೆಗೆ ಅದು ಅನ್ವರ್ಥವಾಗಿದೆ. ಹೀಗೆ ಅಭಿವೃದ್ಧಿಪಡಿಸಿದ ಶಾಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವುದು ಗ್ರಾಮಸ್ಥರ ಹೊಣೆಯಾಗಿದೆ. ಶಾಲೆಗಳ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ವಿವರಿಸಿದರು.
ಒಸಾಟ್ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣರಾವ್ ಮಾತನಾಡಿ, “ಒನ್ ಸ್ಕೂಲ್ ಎಟ್ ಎ ಟೈಮ್” ಎಂಬ ಪದಪುಂಜದ ಸಂಕ್ಷಿಪ್ತ ರೂಪ ಒಸಾಟ್ ಆಗಿದೆ. ಗ್ರಾಮೀಣ ಭಾಗಗಳ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಸಾಟ್ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಸಂಸ್ಥೆಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ತಿಳಿಸಿದರು.


ಶಾಲೆಯ ಕೊಠಡಿಗಳು, ಅಡುಗೆ ಕೋಣೆ, ಶೌಚಾಲಯಗಳ ನಿರ್ಮಾಣ ಇತ್ಯಾದಿ ಒಸಾಟ್ ಸಂಸ್ಥೆಯ ಗುರಿಯಾಗಿದೆ. ಶಾಲೆಗಳ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳಿವೆ. ಅದರಂತೆ ಗ್ರಾಮೀಣ ಪ್ರದೇಶದ ಶಾಲೆಯನ್ನು ನಾವು ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸುತ್ತೇವೆ. ರಾಜ್ಯದಲ್ಲಿ ಈವರೆಗೆ 59 ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.
ಬಿಆರ್‍ಸಿ ಎಂ. ತಿಪ್ಪೇಶಪ್ಪ, ವನಯಾತ್ರಿ ಸಂಸ್ಥೆಯ ಜಸ್ಟಿನ್, ಒಸಾಟ್ ಸಂಸ್ಥೆಯ ಕಿಶೋರ್‍ಕುಮಾರ್, ಗುತ್ತಿಗೆದಾರ ಮನೋಹರ್ ಎನ್.ಶೆಟ್ಟಿ, ಅರಬಗಟ್ಟೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಎಂ.ಸಿ. ಮಂಜಪ್ಪ, ಪ್ರಭಾರ ಮುಖ್ಯ ಶಿಕ್ಷಕಿ ಸಾಕಮ್ಮ, ಸಹ ಶಿಕ್ಷಕರಾದ ಎಚ್. ಮಂಜಪ್ಪ, ಬಿ. ರೇಖಾ, ಅಶೋಕ್ ವಿ.ಗಿರಿಮಲ್ಲಪ್ಪನವರ್ ಇತರರು ಮಾತನಾಡಿದರು.
ಅರಬಗಟ್ಟೆ ಗ್ರಾಪಂ ಅಧ್ಯಕ್ಷೆ ಅನಿತಾ ಕರಿಬಸಪ್ಪ, ಉಪಾಧ್ಯಕ್ಷೆ ರೇಣುಕಮ್ಮ, ಸದಸ್ಯರಾದ ಮಂಜಪ್ಪ, ಕೆ.ವಿ. ಮಲ್ಲಯ್ಯ, ಸುಭಾಷ್, ಶ್ರೀನಿವಾಸ್, ಸಿದ್ಧಪ್ಪ ಬೇವಿನಹಳ್ಳಿ, ಎಸ್ಡಿಎಂಸಿ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ರುದ್ರಾನಾಯ್ಕ, ತಾಲೂಕು ಎಸ್ಡಿಎಂಸಿ ಒಕ್ಕೂಟದ ಕಾರ್ಯದರ್ಶಿ ಸತೀಶ್, ಮಹಿಳಾ ಘಟಕದ ಅಧ್ಯಕ್ಷೆ ಸಾವಿತ್ರಮ್ಮ, ನ್ಯಾಮತಿ ತಾಲೂಕು ಎಸ್ಡಿಎಂಸಿ ಒಕ್ಕೂಟದ ಅಧ್ಯಕ್ಷ ರಾಜಶೇಖರ್, ಅರಬಗಟ್ಟೆ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *