ಹೊನ್ನಾಳಿ : ರೈತರು ಹಾಗೂ ಸಾರ್ವಜನಿಕರು ಸಂಕಷ್ಟದಲ್ಲಿರುವ ಸಮಯದಲ್ಲಿ ಅವರ ಕಣ್ಣೀರು ಒರೆಸ ಬೇಕಾಗಿದ್ದು ನನ್ನ ಕರ್ತವ್ಯ ಈ ನಿಟ್ಟಿನಲ್ಲಿ ನಾನು ಅವಳಿ ತಾಲೂಕಿನಾಧ್ಯಂತ ಸಂಚರಿಸಿ ರೈತರು, ಸಾರ್ವಜನಿಕರ ಸಂಕಷ್ಟಕ್ಕೆ ಆಲಿಸುವ ಕೆಲಸ ಮಾಡುತ್ತಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಿ
ಅವರು ಮಾತನಾಡಿದರು.
ಕಳೆದ ಕೆಲ ದಿನಗಳಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ ಎಂದ ಶಾಸಕರು, ಅವಳಿ ತಾಲೂಕಿನಲ್ಲಿ ಹಿಂದೆಂದು ಕಂಡು ಕೇಳರಿಯದ ರೀತಿ ಮಳೆಯಾಗಿದೆ ಎಂದರು.
ಅವಳಿ ತಾಲೂಕಿನಲ್ಲಿ ಹನ್ನೆಂದು ಸಾವಿರ ಹೆಕ್ಟೇರ್‍ಗ್ ಅಧಿಕ ಪ್ರಮಾಣದಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದ್ದರೇ, ಸಾಕಷ್ಟು ಮನೆಗಳು,ರಸ್ತೆಗಳು,ಸೇತುವೆಗಳು, ಅಂಗನವಾಡಿ ಕಟ್ಟಡಗಳು,ಶಾಲಾಕಟ್ಟಡಗಳಿಗೆ ಹಾನಿಯಾಗಿದೆ ಎಂದರು.
ಸೋಮವಾರ ಅವಳಿ ತಾಲೂಕಿನ ಅಧಿಕಾರಿಗಳ ಸಭೆ ನಡೆಸಿದ್ದು, ಅಧಿಕಾರಿಗಳು ತಮ್ಮ ವೈಯಕ್ತಿಕ ಜೀವನ ಬದಿಗೊತ್ತಿ, ಯಾರೂ ಕೂಡ ರಜೆ ಹಾಕದೇ ಮಳೆಹಾನಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಬಗ್ಗೆ ಸಮಗ್ರ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.
ಅವಳಿ ತಾಲೂಕಿನ ಇಂಚಿಚು ಹಾನಿಯ ಬಗ್ಗೆ ಅಧಿಕಾರಿಗಳು ನನಗೆ ವರದಿ ನೀಡ ಬೇಕು, ಯಾರಾದರೂ ಸವಲತ್ತುಗಳನ್ನು ಕೊಡಿಸಲು ಫಲಾನುಭವಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟರೇ ನಾನು ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲಾ ಎಂದು ಖಡಕ್ ಎಚ್ಚರಿಕೆ ನೀಡಿದರು.
ಕಳೆದ 15 ರಿಂದ 20 ದಿನಗಳಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಮಳೆ ಎನ್ನದೇ ನಿರಂತವಾಗಿ ಓಡಾಟ ನಡೆಸುವ ಮೂಲಕ ಮಳೆಹಾನಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಖುದ್ದು ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದು ಅಧಿಕಾರಿಗಳು ಕೂಡ ಮಳೆಯನ್ನು ಲೆಕ್ಕಿಸದೇ ಹಾನಿಯಾದ ಪ್ರದೇಶಗಳಿಗೆ ತೆರಳುಮೂಲಕ ಜನರ ಸಂಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡ ಬೇಕೆಂದು ಸೂಚಿಸಿದರು.
ವಿವಿಧ ಗ್ರಾಮಗಳಲ್ಲಿ ಶಾಸಕರ ಭೇಟಿ : ಹೊನ್ನಾಳಿ ತಾಲೂಕಿನ ಅರಬಗಟ್ಟೆ,ಸುಂಕದಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ನೀಡಿದ ಶಾಸಕರು, ಅಧಿಕಾರಿಗಳೊಂದಿಗೆ ಮನೆ ಹಾನಿ ಹಾಗೂ ಬೆಳೆಹಾನಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ತಹಶೀಲ್ದಾರ್ ರಶ್ಮಿ, ಇಓ ರಾಮಬೋವಿ, ಕೃಷಿ ಅಧಿಕಾರಿ ಪ್ರತಿಮಾ, ತೋಟಗಾರಿಕೆ ಇಲಾಖೆ ಅಧಿಕಾರಿ ವೀರಭದ್ರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದ ಮುಖಂಡರು, ಗ್ರಾಮಸ್ಥರಿದ್ದರು.