ದಾವಣಗೆರೆ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೆಪಿಸಿಸಿ ಆದೇಶದ ಮೇರೆಗೆ ದಾವಣಗೆರೆ ಉತ್ತರ ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ದಾವಣಗೆರೆ ನಗರದ ವಿವಿಧ ಕಡೆಗಳಲ್ಲಿ ಆಗಸ್ಟ್ 14ರಂದು ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ತ್ಯಾಗ ಬಲಿದಾನದ ಅಮೋಘ ಸಾಧನೆಗಳನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಈ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ತಿಳಿಸಿದ್ದಾರೆ.
ಅಂದು ಸಂಜೆ 4 ಗಂಟೆಗೆ ದಾವಣಗೆರೆ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ನಿಂದ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಆರಂಭವಾಗುವ ಈ ಪಾದಯಾತ್ರೆಗೆ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಚಾಲನೆ ನೀಡಲಿದ್ದಾರೆ.
ಈ ಪಾದಯಾತ್ರೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪನವರು ಸೇರಿದಂತೆ ಕೆಪಿಸಿಸಿ ಸದಸ್ಯರುಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಆದ ಕಾರಣ ಪಕ್ಷದ ಎಲ್ಲಾ ಜನಪ್ರತಿನಿಧಿಗಳು, ಮುಖಂಡರುಗಳು, ಕಾರ್ಯಕರ್ತರು, ಪಕ್ಷದ ವಿವಿಧ ಘಟಕಗಳಾದ ಎನ್ಎಸ್ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಜಿಲ್ಲಾ ಸೇವಾದಳ, ಕಾರ್ಮಿಕ ವಿಭಾಗ, ಅಸಂಘಟಿತ ಕಾರ್ಮಿಕ, ಪರಿಶಿಷ್ಟ ಜಾತಿ, ಪಂಗಡ, ಓ.ಬಿ.ಸಿ., ಅಲ್ಪಸಂಖ್ಯಾತರು, ಅಂಗವಿಕಲರ ವಿಭಾಗ ಹಾಗೂ ಸಾಮಾಜಿಕ ಜಾಲತಾಣದ ಎಲ್ಲಾ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ಮಹಾನಗರ ಪಾಲಿಕೆ ಸದಸ್ಯರು ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡು ಭಾಗವಹಿಸಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ ತಿಳಿಸಿದ್ದಾರೆ.