ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳ 121 ಕೆರೆಗಳಿಗೆ ನೀರು ತುಂಬಿಸುವ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಲೇಬೇಕೆಂದು ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯರು ಹೇಳಿದರು.
ಮಂಗಳವಾರ ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ನಡೆದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹೊನ್ನಾಳಿ, ಶಿವಮೊಗ್ಗ ಗ್ರಾಮಾಂತರ, ಚನ್ನಗಿರಿ, ಮಾಯಕೊಂಡ, ಹೊಳಲ್ಕೆರೆ, ಚಿತ್ರದುರ್ಗ ತಾಲ್ಲೂಕಿನ 121 ಕೆರೆಗಳಿಗೆ ನೀರು ತುಂಬಿಸುವ ಮಹಾತ್ವಾಕಾಂಕ್ಷೆ ಯೋಜನೆ ಇದಾಗಿದ್ದು ಸಾಸ್ವೆಹಳ್ಳಿ, ಚನ್ನೇಶಪುರ, ಜಕ್ಕಲಿ ಹಾಗೂ ಮುತ್ತಗದೂರು ಪಂಪ್‍ಹೌಸ್‍ಗಳ ಕಾಮಗಾರಿಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಿ, 2023 ರ ಜನವರಿ ತಿಂಗಳಿನಿಂದ ನೀರು ಒದಗಿಸಬೇಕು ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಾಮಗಾರಿಗೆ ಸಂಬಂಧಿಸಿದಂತೆ ಏನಾದರೂ ಅಡೆತಡೆಗಳಿದ್ದರೆ ನನ್ನ ಅಥವಾ ಆಯಾ ಭಾಗದ ಶಾಸಕರ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸಿ ಕೊಡಲಾಗುವುದು. ಪ್ರಸ್ತುತ ವರ್ಷದ ಕೊನೆಯ ವೇಳೆಗೆ ಕರೆಗಳಿಗೆ ನೀರು ಕೊಡಿ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಮುತ್ತಗದೂರು, ಜಕ್ಕಲಿ ಹಾಗೂ ಚನ್ನೇಶಪುರ ಪಂಪ್‍ಹೌಸ್‍ಗಳು ಮತ್ತು ಬಿದರಗಡ್ಡೆ ಮೂಲಕ ಹಾದು ಬರುವ 11 ಕಿ.ಮೀ 66 ಕೆ.ವಿ ವಿದ್ಯುತ್ ಮಾರ್ಗದಲ್ಲಿ ಬರುವ 49 ಗೋಪುರಗಳ ನಿರ್ಮಣಕ್ಕೆ ಸಂಬಂಧಿಸಿದಂತೆ ಏನಾದರೂ ಅಡೆತಡೆಗಳಿದ್ದರೆ ನನ್ನನ್ನು ಸಂಪರ್ಕಿಸಿ. ಒಟ್ಟಾರೆಯಾಗಿ ಯೋಜನೆಯು ಡಿಸೆಂಬರ್ ಅಂತ್ಯದ ವೇಳೆಗೆ ಕಾರ್ಯರೂಪಕ್ಕೆ ಬರುವಂತೆ ಶ್ರಮಿಸಿ ಎಂದು ತಿಳಿಸಿದರು.
ಏತನೀರಾವರಿ ಯೋಜನೆಯ ಪೈಪ್‍ಲೈನ್ ಕೆಲವು ಕಡೆ ಮಾತ್ರ ಬಾಕಿ ಇದ್ದು ರೈತರನ್ನು ಮನವೂಲಿಸಿ ಅಳವಡಿಸಲು ಕ್ರಮ ವಹಿಸಲಾಗುತ್ತದೆ. ಉಳಿದಂತೆ ಪೈಪ್‍ಲೈನ್ ಕಾಮಗಾರಿ ಬಹುತೇಕ ಮುಗಿಯುವ ಹಂತದಲ್ಲಿದೆ. ನೀರನ್ನು ಮೇಲೆತ್ತಲು ಜಾಕ್‍ವೆಲ್ ಕಾಮಗಾರಿ, ವಿದ್ಯುತ್ ಸರಬರಾಜು ಕಾಮಗಾರಿ ಮಾತ್ರ ಬಾಕಿ ಇದ್ದು ಮುಂದಿನ ದಿನಗಳಲ್ಲಿ ಪ್ರತಿ ಹತ್ತು ದಿನಗಳಿಗೆ ಗುರಿ ನೀಡಿ ಪ್ರಗತಿ ಸಾಧಿಸಬೇಕು. ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗಾಗಿ ಪೂರ್ಣಗೊಳಿಸಿ 2023 ರ ಜನವರಿಗೆ ಕೆರೆಗಳಿಗೆ ನೀರು ತುಂಬಿಸಲು ಚಾಲನೆ ನೀಡಲೇಬೇಕಾಗಿದೆ ಎಂದರು.
121 ಕೆರೆಗಳಲ್ಲಿ ಹೊನ್ನಾಳಿ ತಾಲ್ಲೂಕಿನ 4, ಶಿವಮೊಗ್ಗ ಗ್ರಾಮಾಂತರ 3, ಚನ್ನಗಿರಿ 72, ಹೊಳಲ್ಕೆರೆ 72 ಹಾಗೂ ಚಿತ್ರದುರ್ಗ ತಾಲ್ಲೂಕಿನ 1 ಕೆರೆಗೆ ನೀರು ತುಂಬಿಸಲಿದ್ದು ಇದರಿಂದ 116 ಗ್ರಾಮಗಳಿಗೆ ಅನುಕೂಲವಾಗಲಿದೆ. ಪೈಪ್‍ಲೈನ್ ಕಾಮಗಾರಿಗೆ ರೂ.431.24 ಕೋಟಿಗಳು ಹಾಗೂ ರೂ.167 ಇತರೆ ಕಾಮಗಾರಿಗೆ ನಿಗದಿ ಮಾಡಲಾಗಿದೆ.
ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಯವರು ಪ್ರಗತಿ ಪರಿಶೀಲನೆ ನಡೆಸಿ ವಿದ್ಯುತ್ ಕಾಮಗಾರಿ ಬಹಳ ನಿಧಾನಗತಿಯಲ್ಲಿ ಕೆಲಸ ನಡೆಯುತ್ತಿದ್ದು ರಾತ್ರಿ-ಹಗಲು ಕೆಲಸ ಮಾಡಬೇಕಾಗಿದೆ. ಎಲ್ಲಾ ಹಂತದಲ್ಲಿಯು ತಾಂತ್ರಿಕತೆಯನ್ನು ಅಳವಡಿಸಿಕೊಂಡು ವೈಜ್ಞಾನಿಕವಾಗಿ ಕಾಮಗಾರಿ ಮಾಡಬೇಕು. ಮೂರು ಜಿಲ್ಲೆಗಳ ಕೆರೆಗಳಿಗೆ ನೀರು ಹರಿಯುವುದರಿಂದ ಪೈಪ್‍ಲೈನ್ ಗುಣಮಟ್ಟದಿಂದ ಕೂಡಿರಬೇಕು. ಕೆಲವು ಕಡೆ ರೈತರು ಭೂಮಿಯನ್ನು ಬಿಟ್ಟುಕೊಡಲ ವಿಳಂಬ ಮಾಡುತ್ತಿದ್ದು ಅವರಿಗೆ ಸರ್ಕಾರದ ಮಾನದಂಡದಂತೆ ನಿಗದಿ ಮಾಡಿದ ಪರಿಹಾರವನ್ನು ಹಾಗೂ ಬೆಳೆ ಪರಿಹಾರವನ್ನು ನೀಡಿ ಭೂಮಿಯನ್ನು ಪಡೆದು ಕಾಮಗಾರಿ ಮುಂದುವರೆಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಪೆÇ್ರ. ಲಿಂಗಣ್ಣ, ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ವಿ. ರಾಮಚಂದ್ರ, ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೇರಿದಂತೆ ಗುತ್ತಿಗೆದಾರ ಕಂಪನಿಯವರು ಇದ್ದರು.