ರಾಧೆ ಮತ್ತು ಕೃಷ್ಣನ ವೇಷದೊಂದಿಗೆ ಮಿಂಚಿದ ಪುಟಾಣಿಗಳು
ಹೊನ್ನಾಳಿ: ಕೃಷ್ಣ ಮಹಾನ್ ತತ್ವಜ್ಞಾನಿಯಾಗಿದ್ದನು ಹಾಗಾಗಿಯೇ ಎಲ್ಲಾ ತಾಯಂದಿರು ತಮ್ಮ ಮಗನನ್ನು ಕೃಷ್ಣನ ರೂಪದಲ್ಲಿ ನೋಡಲು ಇಷ್ಟಪಡುತ್ತಾರೆ ಎಂದು ಭಾರತೀಯ ವಿದ್ಯಾ ಸಂಸ್ಥೆಯ ನಿರ್ದೇಶಕ ಸುರೇಶ್ ಶೇಟ್ ಹೇಳಿದರು.
ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ರಾಧಾ ಕೃಷ್ಣನ ವೇಷ ಕಾರ್ಯಕ್ರಮದಲ್ಲಿ ಅವರು ಶುಕ್ರವಾರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಶಕುಂತಲಾ ರಾಜ್ ಕುಮಾರ್ ಮಾತನಾಡಿ, ಕೃಷ್ಣ ವೇಷ ಧರಿಸಿದರೆ ಸಾಲದು. ಆತ ನೀಡಿದ ಸಾಮಾಜಿಕ ಕಳಕಳಿಯನ್ನು ನಾವು ರೂಢಿಸಿಕೊಳ್ಳಬೇಕು. ಮಕ್ಕಳು ನಮ್ಮನ್ನು ಅನುಸರಿಸುವುದು ಹೆಚ್ಚು, ಆದ್ದರಿಂದ ನಾವು ಅವರಿಗೆ ಮಾದರಿಯಾಗಿರಬೇಕು ಎಂದರು.
ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಗಿರೀಶ್ ಎನ್. ಎಂ ಮಾತನಾಡಿ, ಧಾರವಾಹಿಗಳ ಹಿಂದೆ ಹೋಗುವುದಕ್ಕಿಂತ ಪುಸ್ತಕಗಳನ್ನು ಹೆಚ್ಚು ಓದಬೇಕು. ಈ ಜ್ಞಾನವನ್ನು ನಮ್ಮ ಮಕ್ಕಳಿಗೆ ಹಂಚಬೇಕು. ಆಗ ನಾವು ಜ್ಞಾನವಂತರಾಗುತ್ತೇವೆ. ನಮ್ಮ ಮಕ್ಕಳು ಜ್ಞಾನಿಗಳಾಗುತ್ತಾರೆ ಎಂದರು.
ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪುನೀತ್ ಮಾತನಾಡಿ, ಶುಕ್ಲ ಪಕ್ಷ ಹಾಗೂ ಕೃಷ್ಣ ಪಕ್ಷದ ಉದ್ದೇಶ, ಕೃಷ್ಣ ಜನನ, ಆತ ಮಾಡಿದ ಮಹಾನ್ ಕಾರ್ಯಗಳ ಬಗ್ಗೆ ವಿವರಿಸಿದರು.
ಸಂಸ್ಥೆಯ ಸಹಕಾರ್ಯದರ್ಶಿ ಗಣೇಶ್ ಕೆ, ನಿರ್ದೇಶಕರಾದ ಎಚ್.ಎಂ ಅರುಣ್ ಕುಮಾರ್, ಹಾಲೇಶ್ ಕುಂಕೋದ್, ರೂಪ ಕರಿಸಿದ್ದಿಪ್ಪ, ನಾಮದೇವ್ ಮುಖ್ಯಶಿಕ್ಷಕ ತಿಮ್ಮೇಶ್ ಆರ್. ಶಿಕ್ಷಕರಾದ ರುಕ್ಮಿಣಿ ಎಂ, ಶಶಿಕಲಾ ಎಂ, ಅಶೋಕ ಎಚ್, ಶೋಭ ಮಟ್ಟಿಮನಿ, ನಾಗಮ್ಮ ಎಸ್, ಮಂಜುಪ್ಪ ಎಲ್ ಇದ್ದರು.