ದಾವಣಗೆರೆ: ದಾವಣಗೆರೆ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‍ಗೆ ಸಂಬಂಧಿಸಿದಂತೆ ಸ್ಮಾರ್ಟ್‍ಸಿಟಿಯಿಂದ ಈಗಾಗಲೇ ನಿರ್ಮಿಸಿರುವ ಸಮುದಾಯ ಭವನವನ್ನು ಟ್ರಸ್ಟ್‍ಗೆ ಹಸ್ತಾಂತರಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಲಾಗುವುದು ಎಂದು ಟ್ರಸ್ಟ್ ಗೌರವಾಧ್ಯಕ್ಷರು, ಶಾಸಕರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರು ತಿಳಿಸಿದರು.
ಇಂದು ನಗರದ ಶ್ರೀದುರ್ಗಾಂಬಿಕಾ ಶಾಲಾ ಆವರಣದಲ್ಲಿ ನಡೆದ ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‍ಗೆ ಸೇರಿದ ಜಾಗದಲ್ಲಿ ಸ್ಮಾರ್ಟ್‍ಸಿಟಿಯೇ ಸಮುದಾಯ ಭವನ ನಿರ್ಮಿಸಲು ಮುಂದೆ ಬಂದಿದ್ದು, ಅದರಂತೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಅವಕಾಶ ನೀಡಲಾಗಿತ್ತು, ಇದೀಗ ಸ್ಮಾರ್ಟ್‍ಸಿಟಿಯವರು ಸಮುದಾಯಭವನವನ್ನು ಹಸ್ತಾಂತರಿಸುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುತ್ತೇನೆ ಎಂದರು.
ಶ್ರೀದುರ್ಗಾಂಬಿಕಾ ದೇವಿಯ 2021ರ ಕಾರ್ತಿಕೋತ್ಸವ ಹಾಗೂ 2022ರ ಜಾತ್ರಾ ಮಹೋತ್ಸವದ ಲೆಕ್ಕಪತ್ರಗಳನ್ನು ಪರಿಶೀಲಿಸಲಾಯಿತು. ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ಕೊಂಡಜ್ಜಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳನ್ನು ಬಾಡಿಗೆಗೆ ನೀಡಲು ಸಭೆ ಒಪ್ಪಿತು.
ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‍ನ ಟ್ರಸ್ಟಿಗಳಾದ ಸಿಂಧೆ ಬಾಬುರಾವ್ ಮತ್ತು ಮುದೇಗೌಡ್ರು ಸಿದ್ದಲಿಂಗಪ್ಪನವರು ನಿಧನರಾದ ಹಿನ್ನೆಲೆಯಲ್ಲಿ ಅವರ ಮಕ್ಕಳಾದ ಎಸ್.ಬಿ.ಶಂಕರರಾವ್ ಸಿಂಧೆ ಮತ್ತು ಮುದೇಗೌಡ್ರು ವಿಶ್ವನಾಥ್ ಅವರನ್ನು ಟ್ರಸ್ಟಿಗಳನ್ನಾಗಿಸಲು ಸಭೆ ಒಪ್ಪಿತು.
ಈ ಸಭೆಯಲ್ಲಿ ಟ್ರಸ್ಟಿಗಳಾದ ಗೌಡ್ರು ಚನ್ನಬಸಪ್ಪ, ಜೆ.ಕೆ.ಕೊಟ್ರಬಸಪ್ಪ, ಹೆಚ್.ಬಿ.ಗೊಣೇಪ್ಪ, ಬಾಬುರಾವ್ ಸಾಳಂಕಿ, ಸೊಪ್ಪಿನ ಗುರುರಾಜ್, ಬಿ.ಹೆಚ್.ವೀರಭದ್ರಪ್ಪ, ಹನುಮಂತರಾವ್, ಸ್ಮಾರ್ಟ್‍ಸಿಟಿ ಎಂ.ಡಿ. ರವೀಂದ್ರ ಮಲ್ಲಾಪುರ, ಸತೀಶ್, ಮಾರುತಿ, ಸುರೇಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *