ಹುಣಸಘಟ್ಟ: ಸಾಸ್ವೆಹಳ್ಳಿ ಏತ ನೀರಾವರಿ ವಿದ್ಯುತ್ ಟವರ್ ಕಂಬದ ಕಾಮಗಾರಿ ಕೆಲಸ ತಕ್ಷಣ ತಡೆಹಿಡಿದು ಪವರ್ ಲೈನ್ ಮಾರ್ಗವನ್ನು ಬದಲಾಯಿಸುವಂತೆ ಸಾಸ್ವೆಹಳ್ಳಿ ಎಡಿವಿಎಸ್ ಕಾಲೇಜು ಸಂಸ್ಥಾಪಕ ಅಧ್ಯಕ್ಷ ಡಾ. ಎಸ್ ಎಚ್ ಕೃಷ್ಣಮೂರ್ತಿ ಹೇಳಿದರು.
ಸಾಸ್ವೆಹಳ್ಳಿ ಎಡಿವಿಎಸ್ ಕಾಲೇಜಿನ ಆಟದ ಮೈದಾನದಲ್ಲಿ ಏತ ನೀರಾವರಿ ವಿದ್ಯುತ್ ಟವರ್ ನ 48ನೇ ಕಂಬದ ನಿರ್ಮಾಣದ ಕಾಮಗಾರಿ ಕೆಲಸ ತಡೆದು ಮಾತನಾಡಿದ ಅವರು ಈ ಸ್ವತ್ತು ನಮ್ಮ ಆದಿದ್ರಾವಿಡ ವಿದ್ಯಾ ಟ್ರಸ್ಟ್ ನ ಜಾಗವಾಗಿದ್ದು ತಹಸಿಲ್ದಾರ್ ಆಫೀಸ್ ನಿಂದ ಸರ್ವೆ ಮಾಡಿ ಈ ಸ್ವತ್ತು ನೀಡಿದ್ದಾರೆ. ಸುಮಾರು 32 ವರ್ಷಗಳಿಂದಲೂ ನಾವು ಸ್ವಾಧೀನದಲ್ಲಿ ಇದ್ದೇವೆ. ಈಗ ಏತ ನೀರಾವರಿ 11ಕೆ ವಿ ಪವರ್ ಲೈನ್ 48ನೇ ಕಂಬವನ್ನು ಮಕ್ಕಳು ಆಟವಾಡುವ ಜಾಗದಲ್ಲಿ ನಿರ್ಮಾಣ ಮಾಡಲು ಜೆಸಿಬಿ ಬಳಸಿ ಗುಂಡಿ ತೆಗೆಯುತ್ತಿದ್ದಾರೆ. ಎಳೆಯ ಮಕ್ಕಳ ಮೆದುಳಿನ ಮೇಲೆ 11ಕೆ ವಿ ಪವರ್ ಲೈನ್ ಪರಿಣಾಮ ಬೀರುವುದರಿಂದ ನಾವು ಈ ಕಾಮಗಾರಿಗೆ ವಿರೋಧವನ್ನು ವ್ಯಕ್ತಪಡಿಸುತ್ತೇವೆ. ವಿದ್ಯುತ್ ಮಾರ್ಗ ಇಲ್ಲಿಯೇ ಮಾಡಬೇಕೆಂದೇನಿಲ್ಲ. ಮಾರ್ಗವನ್ನು ಬದಲಾಯಿಸಬಹುದು ಸಂಬಂಧಪಟ್ಟ ಇಲಾಖೆಯವರು ವಿದ್ಯುತ್ ಲೈನ್ ನಿಂದ ಮುಂದೆ ಸಂಭವಿಸಬಹುದಾದ ಅವಘಡಗಳನ್ನು ಪರಿಶೀಲಿಸಿ ತಕ್ಷಣ ವಿದ್ಯುತ್ ಮಾರ್ಗ ಬದಲಾಯಿಸುವಂತೆ ಸಾಸ್ವೆಹಳ್ಳಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಸಾಸ್ವೆಹಳ್ಳಿ ನೀರಾವರಿ ಇಲಾಖೆಯ ಎಇಇ ರಾಜಕುಮಾರ ಮಾತನಾಡಿ ಸರ್ಕಾರದ ಸರ್ವೇ ಪ್ರಕಾರ 42/1 ರಲ್ಲಿ ಶಾಂತಮ್ಮ ಕೋಂ ಕಾಂತರಾಜ್ ರವರ ಜಮೀನು ಆಗಿದ್ದು ರೈತರ ಸಹಕಾರದಿಂದ ನಾವು ಜಮೀನಿನಲ್ಲಿ ಕಾಮಗಾರಿ ಕೆಲಸ ಪ್ರಾರಂಭಿಸಿದ್ದೇವೆ. ಪಕ್ಕದ ಎಡಿವಿಸ್ ಕಾಲೇಜ್ ನವರು ಇದು ನಮ್ಮದು ಎಂದು ಹೇಳುತ್ತಾರೆ. ಆದರೆ ಅವರು ಯಾವುದೇ ಸರಿಯಾದ ದಾಖಲೆ ಮಾಹಿತಿಗಳು ಒದಗಿಸದೇ ಇರುವುದರಿಂದ ನಾವು ಅಧಿಕೃತವಾಗಿ ಏನು ದಾಖಲೆ ಇದ್ದಾವೆ ಅದರ ಪ್ರಕಾರ ಕೆಲಸ ಮಾಡುತ್ತಿದ್ದೇವೆಂದು ಸ್ಪಷ್ಟಪಡಿಸಿದರು. ಒಂದು ವೇಳೆ ಎಡಿವಿಎಸ್ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರು ಸರಿಯಾದ ದಾಖಲೆ ಒದಗಿಸಿದರೆ ಪರಿಶೀಲಿಸಿ ಕೆಲಸ ನಿಲ್ಲಿಸಿ ಗುಂಡಿ ಮುಚ್ಚಿಸಿ ಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಡಿವಿಎಸ್ ಕಾಲೇಜ್ ಪ್ರಾಚಾರ್ಯ ಎಚ್ ಬಿ ಗಣಪತಿ ಕಾಲೇಜಿನ ಉಪನ್ಯಾಸಕರು, ಜಿವಿಪಿಆರ್ ಇಂಜಿನಿಯರ್ ವಿನೋದ್ ರೆಡ್ಡಿ, ಸೈಟ್ ಇಂಜಿನಿಯರ್ ದೇವೇಂದ್ರ ರೆಡ್ಡಿ ಸೂಪರ್ ವೈಸರ್ ಸಂದೀಪ್ ಜಮೀನಿನ ಮಾಲೀಕರು ಉಪಸ್ಥಿತರಿದ್ದರು.