ಹೊನ್ನಾಳಿ : ಮಾಜಿ ಶಾಸಕರು ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲಾ, ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದೇನೆಂದು ಅವರು ಸಾಬೀತು ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಹೊಸದೇವರಹೊನ್ನಾಳಿ, ಹಳೇದೇವರಹೊನ್ನಾಳಿ, ತಕ್ಕನಹಳ್ಳಿ, ಕಮ್ಮಾರಘಟ್ಟೆ, ಕಮ್ಮಾರಘಟ್ಟೆತಾಂಡ, ಘಂಟ್ಯಾಪುರ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮನೆ ಹಾನಿ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.
ಕಳೆದೊಂದು ತಿಂಗಳಿನಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾದ್ಯಂತ ಅಧಿಕಾರಿಗಳೊಂದಿಗೆ ಮಳೆ ಹಾನಿ ಗ್ರಾಮಗಳಿಗೆ ಹಗಲು ರಾತ್ರಿ ಎನ್ನದೆ ಊಟ ಉಪಹಾರ ಸೇವಿಸದೆ ಜನರ ಸಂಕಷ್ಟ ಪಾಲಿಸುವ ಕೆಲಸ ಮಾಡುತ್ತಿದ್ದೇನೆ.
ಅಧಿಕಾರಿಗಳೊಂದಿಗೆ ಪಾರದರ್ಶಕವಾಗಿ ಪಕ್ಷಪಾತ ಮಾಡದೆ, ಜಾತಿ, ಧರ್ಮ ನೋಡದೆ, ಎಲ್ಲಾ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಹಾನಿ ವೀಕ್ಷಿಸಿದ್ದೇನೆ.
ಮನೆ ಹಾನಿಯಾದವರು ಯಾವುದೆ ಪಕ್ಷಕ್ಕೆ ಸೇರಿದ್ದರೂ ಕೂಡ ಅವರ ಮನೆಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ.
ಜನರು ಸಂಕಷ್ಟದಲ್ಲಿರುವ ಸಮಯದಲ್ಲಿ ಕಣ್ಣೀರು ಒರೆಸುವುದು ನನ್ನ ಕರ್ತವ್ಯ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. ಇದನ್ನು ಸಹಿಸದ ಮಾಜಿ ಶಾಸಕರು ಬಿಜೆಪಿಯವರಿಗೆ ಮಾತ್ರ ಮನೆ ಹಾನಿ ಪರಿಹಾರ ಕೊಡುತ್ತಿದ್ದಾರೆಂದು ಆರೋಪ ಮಾಡಿದ್ದು, ಇದರಲ್ಲಿ ಯಾವುದೆ ಸತ್ಯಾಂಶ ಇಲ್ಲ, ನಾನು ಅವರಿಗೆ ಸವಾಲು ಹಾಕುತ್ತೇನೆ ನಾನು ಪಾರ್ಟಿ ಪಕ್ಷ ಎಂದು ಮಾಡಿದ್ದರೆ ಅದನ್ನು ಅವರು ಸಾಬೀತು ಮಾಡಬೇಕು. ಒಂದು ವೇಳೆ ಅವರು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆಂದು ಸವಾಲು ಹಾಕಿದರು.
ನಾನು ಬಡವರ ಹೊಟ್ಟೆಯ ಮೇಲೆ ಕಲ್ಲು ಹೊಡೆಯುವ ಕೆಲಸ ಎಂದೂ ಮಾಡಿಲ್ಲಾ, ಹಾಗೇನಾದ್ದರೂ ನಾನು ಮಾಡಿದ್ದರೆ ಸವಾಲ್ ಸ್ವೀಕರಿಸಿ ಚರ್ಚೆಗೆ ಬನ್ನಿ ಎಂದರು.
ನೀವು ಶಾಸಕರಾಗಿದ್ದಾಗ ಮರಳನ್ನು ಲೂಟಿ ಹೊಡೆದಿರಿ, ಆದರೆ ನನ್ನ ಅವಧಿಯಲ್ಲಿ ಮರಳು ಮುಕ್ತವಾಗಿ ಸಿಗುತ್ತಿದೆ ಎಂದ ಶಾಸಕರು, ಮಾಜಿ ಶಾಸಕರು ಸುಳ್ಳು, ಕಪಟ ನಾಟಕವಾಡುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಸ್ಪಂಧಿಸುವುದನ್ನು ಕಲಿಯಬೇಕು ಎಂದರು.
ಈ ಸಂದದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ತಾಂಡಾಭಿವೃದ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ, ಮುಖಂಡರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತೀತತರಿದ್ದರು.

Leave a Reply

Your email address will not be published. Required fields are marked *