ಹುಣಸಘಟ್ಟ: ಪ್ರಪಂಚದಲ್ಲಿ ಶಿವ ದೀಕ್ಷೆಗಿಂತ ದೊಡ್ಡ ದೀಕ್ಷೆ ಬೇರೊಂದಿಲ್ಲ. ಶಿವದೀಕ್ಷೆ ತೆಗೆದುಕೊಂಡವರಿಗೆ ಲೌಕಿಕ ಬದುಕಿನಲ್ಲಿ ದೈವೀ ಗುಣ ಜಾಸ್ತಿಯಾಗಲಿದೆ ಎಂದು ಕೆಳದಿ ರಾಜ ಗುರುಮಠ ಕವಲೇದುರ್ಗದ ಶ್ರೀ ಮರುಳಸಿದ್ಧ ಮಹಾಸ್ವಾಮೀಜಿ ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹೊಟ್ಯಾಪುರ ಹಿರೇಮಠದಲ್ಲಿ ಗುರುವಾರ ಬೆಳಿಗ್ಗೆ ನಡೆದ ಉಚಿತ ಶಿವದೀಕ್ಷೆ ಕಾರ್ಯಕ್ರಮದಲ್ಲಿ
ಜಂಗಮ ವಟುಗಳಿಗೆ ಶಿವದೀಕ್ಷೆ ಮಂತ್ರೋಪದೇಶ ಬೋಧಿಸಿ
ಆಶೀರ್ವಚನ ನೀಡಿದ ಶ್ರೀಗಳು ಮಾಂಸ ಮಯ ಶರೀರ ಮಂತ್ರ ಮಯ ಶರೀರ ವಾಗದಿದ್ದರೆ ದೇಹ ದಂಡ ವಾಗುತ್ತದೆ. ಯಾರು ಸಜ್ಜನರು ಬೇರೆಯವರಿಗೆ ಕಿರುಕುಳ ನೀಡದೆ ಮೋಸ ಮಾಡದೆ ಧರ್ಮಾಚರಣೆಯ ಮಾಡಿಕೊಂಡು ಬರುತ್ತಾರೋ, ಸಂತರು ಶರಣರು ಶಿವಯೋಗಿಗಳು ದಾಸರು ಇವರೆಲ್ಲಾ ದೇವತಾ ಮನುಷ್ಯರಾಗಿ ಬಂದವರು. ಇವತ್ತು ನೀವೆಲ್ಲ ಧರ್ಮಾಚರಣೆ ಮೂಲಕ ಲಿಂಗ ದೀಕ್ಷೆ ಪಡೆದುಕೊಂಡಿರುವುದರಿಂದ ನೀವೆಲ್ಲ ದೇವತಾ ಮನುಷ್ಯರೇ. ಇನ್ನು ಮುಂದೆ ನೀವೆಲ್ಲಾ ಧರ್ಮ ಪರಿಪಾಲನೆ ಮಾಡಿಕೊಂಡು ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಿದರು.
ಹೊಟ್ಯಾಪುರ ಹಿರೇಮಠದ ಶ್ರೀ ಗಿರಿ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಗಳು ಶಿವ ದೀಕ್ಷಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿ ಪ್ರತಿಯೊಬ್ಬರು ಲಿಂಗಪೂಜೆ ಮಾಡುವುದರ ಮೂಲಕ ತಮ್ಮ ಅಂತರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮಣ್ಣಿಗೆ ಸಂಸ್ಕಾರ ಕೊಟ್ಟಲ್ಲಿ ಮಡಿಕೆ ಯಾಗಿ, ಲೋಹಕ್ಕೆ ಸಂಸ್ಕಾರ ನೀಡಿದ್ದಲ್ಲಿ ಆಭರಣವಾಗಿ, ನೀರಿಗೆ ಸಂಸ್ಕಾರ ನೀಡಿದಲ್ಲಿ ತೀರ್ಥವಾಗುತ್ತದೆ. ಹಾಗೆಯೇ ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಮನೆಯಲ್ಲಿ ಮನದಲ್ಲಿ ಜ್ಯೋತಿ ಬೆಳಗು ವಂತಾಗಬೇಕು, ಬದುಕಿನಲ್ಲಿ ಸತ್ಯಶುದ್ಧ ಹಾಗೂ ಕಾಯಕ ಇರಬೇಕು ಎಂದರು.
ಉಚಿತ ಶಿವದೀಕ್ಷೆ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಗ್ರಾಮಗಳಿಂದ ಆಗಮಿಸಿದ 25 ಜಂಗಮ ವಟುಗಳು ಶಿವದೀಕ್ಷೆ ಪಡೆದು ಗ್ರಾಮದ ಮನೆಮನೆಗೆ ತೆರಳಿ ಭಿಕ್ಷಾಟನೆ ನಡೆಸಿದರು. ಈ ಸಂದರ್ಭದಲ್ಲಿ ಪುರೋಹಿತರಾದ ಚೆನ್ನಯ್ಯ ಶಾಸ್ತ್ರಿ, ರೇಣುಕಾರಾಧ್ಯ ಶಾಸ್ತ್ರಿ, ರಾಜಶೇಖರಯ್ಯ ನಾಗರಾಜಯ್ಯ ಉಪಸ್ಥಿತರಿದ್ದರು. ಸುತ್ತಮುತ್ತಲ ಗ್ರಾಮದಿಂದ ಆಗಮಿಸಿದ ಭಕ್ತರಿಗೆ ಕ್ಯಾಸಿನಕೆರೆ ಗ್ರಾಮದ ಕಾಟಿ ಶಂಕ್ರಪ್ಪ ದಂಪತಿಗಳು ಪ್ರಸಾದ ವಿನಿಯೋಗ ಮಾಡಿದ್ದರು.