ಹೊನ್ನಾಳಿ:
ಗಣೇಶ ಚತುರ್ಥಿಗೆ ದಿನಗಣನೆ ಪ್ರಾರಂಭವಾಗಿದ್ದು, ಪಟ್ಟಣದ ಕುಂಬಾರ ಬೀದಿಯಲ್ಲಿ ಗಣೇಶ ವಿಗ್ರಹಗಳ ತಯಾರಿಕೆ ಭರದಿಂದ ಸಾಗಿದೆ. ಇದೀಗ, ಗಣೇಶ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಕುಂಬಾರ ಬೀದಿಯ ಪರಮೇಶ್ವರಪ್ಪ ಮತ್ತು ಅವರ ಮಗ ಬಸವರಾಜ್ ಹೆಚ್ಚಿನ ಪ್ರಮಾಣದಲ್ಲಿ ಗಣೇಶ ವಿಗ್ರಹಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.
ಜೇಡಿಮಣ್ಣು, ಹತ್ತಿಯ ಎಳೆ ಬಳಸಿ ಮಣ್ಣನ್ನು ಹದವಾಗಿ ಮಿಶ್ರಣ ಮಾಡಿ ವಿಗ್ರಹ ತಯಾರಿಕೆಗೆ ಉಪಯೋಗಿಸಲಾಗುತ್ತದೆ. ವಿಗ್ರಹ ತಯಾರಿಕೆಗೆ ಅಗತ್ಯವಾದ ಮಣ್ಣನ್ನು ಹತ್ತಾರು ಕಿಮೀಗಳಷ್ಟು ದೂರದಿಂದ ತಂದು ರಾಶಿ ಮಾಡಿಕೊಳ್ಳುತ್ತಾರೆ. ರಾಶಿ ಮಾಡಿದ ನಂತರ ಮಣ್ಣನ್ನು ಜರಡಿ ಹಿಡಿಯಲಾಗುತ್ತದೆ. ನಂತರ ಮಣ್ಣಿಗೆ ಹದವಾದ ಪ್ರಮಾಣದಲ್ಲಿ ನೀರು ಮಿಶ್ರಣ ಮಾಡಿ ಕಲಸಿಕೊಳ್ಳಲಾಗುತ್ತದೆ.
ಹೀಗೆ ಗಣಪತಿ ವಿಗ್ರಹಗಳನ್ನು ಮಾಡಲು ಸಿದ್ಧತೆ ಮಾಡಿಕೊಂಡ ನಂತರ ಕಲಾವಿದರಾದ ಪರಮೇಶ್ವರಪ್ಪ ಮತ್ತು ಎನ್. ಬಸವರಾಜ್ ತಯಾರಿಕೆ ಪ್ರಾರಂಭಿಸುತ್ತಾರೆ. ವಿವಿಧ ಆಕಾರ, ವಿನ್ಯಾಸದ ಗಣಪತಿ ವಿಗ್ರಹಗಳನ್ನು ತಯಾರಿಸುವುದರಲ್ಲಿ ಇವರು ಸಿದ್ಧಹಸ್ತರು. ದೊಡ್ಡ ಗಣಪತಿ ವಿಗ್ರಹಗಳಾದರೆ ಎರಡು ದಿನಗಳಿಗೆ ಒಂದು, ಚಿಕ್ಕ ಗಣಪತಿ ವಿಗ್ರಹಗಳಾದರೆ ದಿನಕ್ಕೆ ಎರಡು ವಿಗ್ರಹ ತಯಾರಿಸುತ್ತಾರೆ.
ಹೊನ್ನಾಳಿ ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳ ಜನತೆ ಇವರಲ್ಲಿಯೇ ಗಣಪತಿ ಖರೀದಿಸುತ್ತಾರೆ. ಸುಮಾರು ಎರಡು ತಿಂಗಳ ಮೊದಲೇ ಮುಂಗಡವಾಗಿ ಹಣ ನೀಡಿರುತ್ತಾರೆ. ಹೊನ್ನಾಳಿಯಲ್ಲಿ ಗಣಪತಿ ವಿಗ್ರಹ ಮಾರಾಟ ಮಾಡುವುದಷ್ಟೇ ಅಲ್ಲದೇ ದಾವಣಗೆರೆ, ಶಿವಮೊಗ್ಗ ನಗರಗಳಿಗೂ ವಿಗ್ರಹಗಳನ್ನು ಕೊಂಡೊಯ್ಯುತ್ತಾರೆ.
ವಿಗ್ರಹಗಳ ತಯಾರಿಕೆ ಬಗ್ಗೆ ಕಲಾವಿದರಾದ ಪರಮೇಶ್ವರಪ್ಪ ಮತ್ತು ಬಸವರಾಜ್ ಅವರನ್ನು ಮಾತಿಗೆಳೆದರೆ ಅವರು ನಿರಾಶಾಭಾವದಿಂದ ಪ್ರತಿಕ್ರಿಯಿಸುತ್ತಾರೆ. ಏಕೆಂದರೆ, ವಿಗ್ರಹ ತಯಾರಿಕೆಗೆ ಅಗತ್ಯವಾದ ವಸ್ತುಗಳ ಅಲಭ್ಯತೆ, ತಯಾರಿಕಾ ವೆಚ್ಚ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೂ ವಿಗ್ರಹಗಳ ಬೆಲೆಯನ್ನು ಮಾತ್ರ ಹೆಚ್ಚಿಸುವಂತಿಲ್ಲದಿರುವುದು. ಬಣ್ಣಗಳ ಬೆಲೆ ಗಗನಕ್ಕೇರಿರುವುದರಿಂದ ಅನಿವಾರ್ಯವಾಗಿ ಹೆಚ್ಚಿನ ಬೆಲೆ ನೀಡಿ ಬಣ್ಣ ಖರೀದಿಸಿ ವಿಗ್ರಹಗಳಿಗೆ ಉಪಯೋಗಿಸಬೇಕು. ಈ ಎಲ್ಲಾ ಕೆಲಸ ಮಾಡಲು ಬೇಕಾಗುವ ಮಾನವ ಶ್ರಮಕ್ಕೆ ತಕ್ಕ ಫಲ ಮಾತ್ರ ದೊರೆಯುವುದಿಲ್ಲ ಎಂಬುದು ಕಲಾವಿದರ ಅತೃಪ್ತಿಗೆ ಕಾರಣ.
ಈ ಎಲ್ಲಾ ಕಾರಣಗಳಿಂದಾಗಿ ಗಣಪತಿ ವಿಗ್ರಹಗಳ ತಯಾರಕರು ತಮ್ಮ ಊರುಗಳನ್ನು ತೊರೆದು ಬೆಂಗಳೂರು ಸೇರುತ್ತಿದ್ದಾರೆ. ಅಲ್ಲಿ ಕೈತುಂಬಾ ಹಣ ದೊರೆಯುತ್ತದೆ ಎಂಬುದು ನೊಂದ ಕಲಾವಿದರ ಅನಿಸಿಕೆಯಾಗಿದೆ.
ಪುನಿತ್ ಗಣೇಶ:
ಗಣೇಶ ವಿಗ್ರಹದ ಜೊತೆ ಪುನಿತ್ ರಾಜ್ಕುಮಾರ್ ಇರುವ ಮೂರ್ತಿಗೆ ಈ ಬಾರಿ ಭಾರೀ ಬೇಡಿಕೆ ಉಂಟಾಗಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚಿತ್ರ ನಟ ಪುನಿತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದು, ಅಭಿಮಾನಿಗಳನ್ನು ಅತೀವ ದುಃಖಕ್ಕೀಡು ಮಾಡಿತ್ತು. ಬಳಿಕ ಪುನಿತ್ ರಾಜ್ಕುಮಾರ್ ಅಭಿಮಾನಿಗಳು ನೇತ್ರ ದಾನ, ರಕ್ತದಾನ ಸೇರಿದಂತೆ ನಾನಾ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ತಮ್ಮ ಮೆಚ್ಚಿನ ನಟನ ಅಗಲಿಕೆಯ ದುಃಖ ಮರೆಯಲು ಮುಂದಾಗಿದ್ದರು. ಇದೀಗ, ಪುನಿತ್ ಗಣೇಶನನ್ನು ಪ್ರತಷ್ಠಾಪಿಸುವ ಮೂಲಕ ಮತ್ತೊಮ್ಮೆ ಅಗಲಿದ ನಟನನ್ನು ನೆನಪು ಮಾಡಿಕೊಳ್ಳಲು ಮುಂದಾಗಿದ್ದಾರೆ.
ಮೊದಲೇ ಆರ್ಡರ್ ಮಾಡಿದವರಿಗೆ ಮಾತ್ರ ಪುನಿತ್ ಗಣೇಶನನ್ನು ತಯಾರಿಸಿದ್ದೇವೆ ಎನ್ನುತ್ತಾರೆ ಗಣೇಶ ವಿಗ್ರಹ ತಯಾರಕ ಎನ್. ಬಸವರಾಜ್.
ಖೋಟ್:
ಕಳೆದ ಎರಡು ವರ್ಷಗಳಿಂದ ಗಣಪತಿ ವಿಗ್ರಹ ತಯಾರಿಸುವ ಕಲಾವಿದರ ಬದುಕಿನ ಮೇಲೆ ಕೊರೊನಾ ಕರಿನೆರಳು ಬಿದ್ದಿತ್ತು. ಕಳೆದ ವರ್ಷ ಕೊರೊನಾ ವೈರಸ್ ಸೋಂಕಿನ ತೀವ್ರತೆಯ ಕಾರಣ ಸರಳವಾಗಿ ಗಣಪತಿ ಹಬ್ಬ ಆಚರಿಸಲಾಯಿತು. ಹೆಚ್ಚಿನ ಪ್ರಮಾಣದಲ್ಲಿ ವಿಗ್ರಹಗಳು ಖರ್ಚಾಗಲಿಲ್ಲ. ದೇವರ ದಯೆಯಿಂದ ಈ ಬಾರಿ ಕೊರೊನಾ ಕರಿನೆರಳು ಇಲ್ಲವಾಗಿದ್ದು, ನಾವು ಸ್ವಲ್ಪವಾದರೂ ಉಸಿರಾಡುವಂತಾಗಿದೆ.
-ಎನ್. ಬಸವರಾಜ್, ಗಣೇಶ ವಿಗ್ರಹ ತಯಾರಕ, ಹೊನ್ನಾಳಿ.
ಖೋಟ್:
ಕಳೆದ ಎರಡು ವರ್ಷಗಳಿಂದ ಕೊರೊನಾ ಸೋಂಕಿನ ಕಾರಣಕ್ಕಾಗಿ ಗಣೇಶ ಹಬ್ಬವನ್ನು ಸರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ವೈಭವದ ಗಣೇಶೋತ್ಸವ ಆಚರಣೆಗೆ ಭರದಿಂದ ಸಿದ್ಧತೆಗಳು ನಡೆದಿವೆ. ಯುವಜನರು ಸಂಭ್ರಮಿಸಲು ಕಾತರರಾಗಿದ್ದಾರೆ.
-ಎಸ್.ಕೆ. ಗೋಪಾಲಯ್ಯ, ಹಳೇದೇವರಹೊನ್ನಾಳಿ, ಹೊನ್ನಾಳಿ ತಾಲೂಕು.