ದಾವಣಗೆರೆ: ಬರುವ ಸೆಪ್ಟಂಬರ್ 22ರಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 55ನೇ ವರ್ಷದ ಜನ್ಮದಿನವನ್ನು ಆದ್ದೂರಿ ಆಚರಣೆ ಮಾಡಲು ಅಭಿಮಾನಿಗಳು ತೀರ್ಮಾನಿಸಿದರು.
ಇಂದು ನಗರದ ಶಾಮನೂರು ಆಂಜನೇಯ ದೇವಸ್ಥಾನದ ಸಮುದಾಯ ಭವನದಲ್ಲಿ ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಭಿಮಾನಿ ಬಳಗದವರು ಹಮ್ಮಿಕೊಂಡಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಭಿಮಾನಿಗಳು ಅಭಿಪ್ರಾಯ ಹಂಚಿಕೊಂಡು ಮಲ್ಲಿಕಾರ್ಜುನ್ ಅವರು ಜಾತ್ಯಾತೀತ ನಾಯಕರಾಗಿದ್ದು, ಅವರ ಜನ್ಮದಿನವನ್ನು ಸರ್ವಧರ್ಮ ಸಭೆ ನಡೆಸುವ ಮೂಲಕ ಈ ರಾಜ್ಯಕ್ಕೆ ಸಂದೇಶ ರವಾನಿಸಬೇಕು, ಇದಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರನ್ನು ಕರೆಸಬೇಕೆಂದರು.
ಅದೇ ರೀತಿ ದಾಖಲೆ ರೂಪದಲ್ಲಿ ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ಕೊರೋನಾ ವಾರಿಯರ್ಸ್‍ಗೆ ಸನ್ಮಾನ ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ನಗರದ ಒಂದೆ ಕಡೆ ಹಮ್ಮಿಕೊಳ್ಳುವುದರ ಜೊತೆಗೆ ಮಲ್ಲಿಕಾರ್ಜುನ್ ಅವರು ಎರಡು ಬಾರಿ ಸಚಿವರಾಗಿದ್ದ ವೇಳೆ ದಾವಣಗೆರೆ ನಗರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪುಸ್ತಕ ಮತ್ತು ಕಿರುಚಿತ್ರ ರೂಪದಲ್ಲಿ ಹೊರತಂದು ಅವನ್ನು ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕೆಂದು ತಿಳಿಸಿದರು.
ಸಭೆಯಲ್ಲಿ ಶಾಮನೂರು ರಾಮಚಂದ್ರಪ್ಪ, ಕುಕ್ಕವಾಡ ಮಲ್ಲೇಶಪ್ಪ, ಸೈಯದ್ ಸೈಪುಲ್ಲಾ, ಕಕ್ಕರಗೊಳ್ಳದ ಕೆ.ಜಿ.ಬಸವನಗೌಡ್ರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಎಪಿಎಂಸಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು, ಮಹಾನಗರ ಪಾಲಿಕೆ, ಡಿಸಿಸಿ ಬ್ಯಾಂಕ್, ಗ್ರಾಮ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರು ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅಭಿಮಾನಿಗಳು ಭಾಗವಹಿಸಿದ್ದರು.