ಹೊನ್ನಾಳಿ:
ಭಾರೀ ಮಳೆಯಿಂದಾಗಿ ಹೊನ್ನಾಳಿ, ನ್ಯಾಮತಿ ತಾಲೂಕುಗಳಾದ್ಯಂತ ಫಸಲಿಗೆ ಬಂದಿರುವ ಅಡಕೆ ತೋಟಗಳಲ್ಲಿ ನೀರು ನಿಂತು ಹರಳುಗಳು ಉದುರುತ್ತಿರುವುದು ಕಂಡುಬಂದಿದೆ. ಇದನ್ನು ತಪ್ಪಿಸಲು ಕೆಲವು ಪರಿಹಾರೋಪಾಯಗಳನ್ನು ಅನುಸರಿಸಬೇಕು ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಜಿ.ಆರ್. ವೀರಭದ್ರಸ್ವಾಮಿ ತಿಳಿಸಿದ್ದಾರೆ.
ಅಡಕೆ ತೋಟದಲ್ಲಿ ನಿಂತಿರುವ ನೀರನ್ನು ರೈತರು ಮೊದಲು ಹೊರಹಾಕಬೇಕು. ನಂತರ ಪ್ರತಿ ಗಿಡಕ್ಕೆ 2 ಕೆಜಿಯಷ್ಟು ಬೇವಿನ ಹಿಂಡಿ ಮತ್ತು ಟ್ರೈಕೋಡರ್ಮಾ ಜೈವಿಕ ಗೊಬ್ಬರವನ್ನು ಗಿಡದ ಬುಡಕ್ಕೆ ನೀಡಬೇಕು. 20 ದಿನಗಳ ನಂತರ ಪ್ರತಿ ಗಿಡಕ್ಕೆ ಅರ್ಧ ಕೆಜಿಯಷ್ಟು 10:26:26 ಸಂಯುಕ್ತ ರಸಗೊಬ್ಬರ, 30 ಗ್ರಾಮ್ ಬೋರ್ಯಾಕ್ಸ್, 50 ಗ್ರಾಮ್ ಮೆಗ್ನೀಷಿಯಂ ಸಲ್ಫೇಟ್ ರಸಗೊಬ್ಬರಗಳನ್ನು ಗಿಡದಿಂದ ಮೂರು ಅಡಿಗಳಷ್ಟು ಅಂತರದಲ್ಲಿ ನೀಡಿ ಮಣ್ಣು ಮುಚ್ಚಬೇಕು ಎಂದು ವಿವರಿಸಿದ್ದಾರೆ.
ಪ್ರತಿ ವರ್ಷ ಫಸಲಿಗೆ ಬರುವ ಅಡಕೆ ಮರಗಳಿಗೆ ರೈತರು ಹವಾಮಾನ ಆಧರಿತ ಬೆಳೆ ವಿಮೆ ಯೋಜನೆಯಡಿ ಸರಕಾರವು ಅಧಿಸೂಚಿಸಿದ ವಿಮಾ ಕಂಪನಿಗಳಿಗೆ ಬೆಳೆ ವಿಮೆಯನ್ನು ನೋಂದಾಯಿಸಿಕೊಳ್ಳಬೇಕು ಎಂದು ವಿನಂತಿಸಿದ್ದಾರೆ.
ಹವಾಮಾನ ವೈಪರೀತ್ಯಗಳಿಂದ ಅಡಕೆ ಬೆಳೆ ಇಳುವರಿ ಕುಂಠಿತವಾದಲ್ಲಿ ರೈತರು ಬೆಳೆ ವಿಮೆ ಪರಿಹಾರವನ್ನು ಪಡೆದುಕೊಳ್ಳುವ ಅವಕಾಶಗಳಿರುತ್ತವೆ. ಸಾಮಾನ್ಯವಾಗಿ ಪ್ರತಿ ವರ್ಷ ಅಡಕೆ ಬೆಳೆಗೆ ವಿಮೆ ನೋಂದಾಯಿಸಲು ಜೂನ್ 30 ಕೊನೆಯ ದಿನವಾಗಿರುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಭಾನುವಾರ ನಿಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *