ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 20 ಜುಲೈ 2016 ರಂದು ಹೊರಡಿಸಿರುವ ಅಧಿಸೂಚನೆಯಂತೆ ಜಲಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33(ಅ) ನಲ್ಲಿ ತಿಳಿಸಿರುವ ಪ್ರದತ್ತ ಅಧಿಕಾರವನ್ನು ಚಲಾಯಿಸಿ ರಾಜ್ಯದ ಕೆರೆಗಳಲ್ಲಿ ಹಾಗೂ ಇತರೆ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸಿನಿಂದ/ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಇನ್ನು ಮುಂದೆ ಯಾವುದೇ ಜಲಗಳಲ್ಲಿ, ನದಿ ಕಾಲುವೆ/ಬಾವಿಗಳಲ್ಲಿ ವಿಸರ್ಜಿಸುವುದನ್ನು ನಿμÉೀಧಿಸಿದೆ.
ಆಗಷ್ಟ್ 31 ರಿಂದ ಆಚರಿಸಲಾಗುವ ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಕಚೇರಿ, ಬೆಂಗಳೂರು ಇವರು ಈ ಕೆಳಕಂಡ ಅಂಶಗಳನ್ನು ಪಾಲಿಸುವಂತೆ ಸೂಚಿಸಿರುತ್ತಾರೆ.
- ಪರಿಸರ ಸ್ನೇಹಿ ಗಣೇಶ ಹಬ್ಬ-2022 ಆಚರಿಸುವ ಸಲುವಾಗಿ ಮಣ್ಣಿನಿಂದ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ತಯಾರಿಸಿ, ಮನೆಯ ಅಂಗಳದಲ್ಲಿ ವಿಸರ್ಜಿಸಿ ಪರಿಸರ ಮಾಲಿನ್ಯ ನಿರ್ಮೂಲನೆಗೆ ಸಹಕರಿಸಿ.
- ಈ ಸಾಲಿನ ಗಣೇಶ ಚತುರ್ಥಿ ಹಬ್ಬವನ್ನು ಸರಳ ರೀತಿಯಲ್ಲಿ ಭಕ್ತಿ ಪೂರ್ವಕವಾಗಿ ದೇವಸ್ಥಾನದೊಳಗೆ ಅಥವಾ ತಮ್ಮ ಮನೆಗಳಲ್ಲಿಯೇ ಆಚರಿಸುವುದು.
- ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಹಾಗೂ ಆರೋಗ್ಯ ಸ್ನೇಹಿ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸುವುದು.
- ಸಾರ್ವಜನಿಕರು ಚಿಕ್ಕ ಹಾಗೂ ಚೊಕ್ಕ ಮಣ್ಣಿನ ಗಣೇಶ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಮನೆಯ ಅಂಗಳದಲ್ಲಿಯೇ ವಿಸರ್ಜಿಸಿ, ಪರಿಸರ ಉಳಿಸಿ.
- ಸಾರ್ವಜನಿಕರು ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಪರಿಸರ ಸ್ನೇಹಿ ವಸ್ತುಗಳ ಬಳಕೆ ಮತ್ತು ಸಾಂಪ್ರದಾಯಿಕವಾಗಿ ಆಚರಿಸುವುದು.
- ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಖರೀದಿಸದೇ, ಮನೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ನಮ್ಮ ಅಮೂಲ್ಯ ಜಲ ಮೂಲಗಳನ್ನು ಮಾಲಿನ್ಯದಿಂದ ರಕ್ಷಣೆ ಮಾಡೋಣ.
- ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣ ರಹಿತ ಮಣ್ಣಿನ ಗಣೇಶ ಮೂರ್ತಿಗಳೊಂದಿಗೆ ಹಬ್ಬ ಆಚರಿಸಿ ತದನಂತರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಮೊಬೈಲ್ ಟ್ಯಾಂಕ್‍ಗಳಲ್ಲಿ/ಕಲ್ಯಾಣಿÀಗಳಲ್ಲಿಯೇ ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದು.
- ಮಣ್ಣಿನ ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೊಬೈಲ್ ಟ್ಯಾಂಕ್‍ಗಳಲ್ಲಿ/ಕಲ್ಯಾಣಿಗಳ ಪಕ್ಕದಲ್ಲಿ ಹಸಿ ಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ ಇತ್ಯಾದಿ) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಕ್ರಮವಹಿಸುವುದು.
- ಸರ್ಕಾರದ ಆದೇಶ ಸಂಖ್ಯೆ:ಎಫ್‍ಇಇ 46 ಇಎನ್‍ವಿ 2000, ದಿನಾಂಕ:13-08-2002 ರಲ್ಲಿನ ಸೂಚನೆಗಳು ಮತ್ತು ಮಾನ್ಯ ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ:72/1998, ದಿನಾಂಕ: 18-07-2005 ರಂದು ನೀಡಿದ ತೀರ್ಪಿನ ನಿರ್ದೇಶನದಂತೆ ರಾತ್ರಿ 10-00 ರಿಂದ ಬೆಳಗಿನ 6-00 ಗಂಟೆ ಅವಧಿಯಲ್ಲಿ ಯಾವುದೇ ರೀತಿಯಿಂದ ಧ್ವನಿವರ್ಧಕಗಳನ್ನು ಅಥವಾ ಧ್ವನಿಯನ್ನುಂಟು ಮಾಡುವ ಡೋಲು, ತಮ್ಮಟೆ ಜಾಗಟೆ ಇತ್ಯಾದಿ ಇವುಗಳನ್ನು ತುರ್ತು ಸಮಯವನ್ನು ಹೊರತುಪಡಿಸಿ ಉಳಿದ ಸಂದರ್ಭಗಳಲ್ಲಿ ಉಪಯೋಗಿಸುವುದನ್ನು ನಿಷೇಧಿಸಲಾಗಿರುತ್ತದೆ.
- ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸಬೇಡಿ, ಪಟಾಕಿಯ ಹೊಗೆ ಮಾಲಿನ್ಯಕಾರಕ, ಅಲ್ಲದೆ ರಸ್ತೆ ತುಂಬಾ ಕಸಮಯವಾಗುತ್ತದೆ, ಪಟಾಕಿ ಶಬ್ಧವು ಕಿವಿಗೆ ಹಾನಿಕರ.
- ಗಣೇಶ ಹಬ್ಬದಲ್ಲಿ ರಸ್ತೆ ಮತ್ತು ಚರಂಡಿಗಳಲ್ಲಿ ಹೂವಿನ ಹಾರ, ತಟ್ಟೆ, ಲೋಟ, ಎಲೆ ಎಸೆಯಬೇಡಿ, ಮನೆಯ ಹತ್ತಿರ ಬರುವ ಕಸದ ವಾಹನಗಳಿಗೆ ನೀಡಿ.
ಜಿಲ್ಲೆಯಲ್ಲಿ ಕಳೆದ ವರ್ಷ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಮಾರಾಟ ಮಾಡದಂತೆ ನಿರ್ಬಂಧಿಸಿ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವುದು ಹಾಗೂ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಅಂತವರ ವಿರುದ್ಧ ಪರಿಸರ ಸಂರಕ್ಷಣಾ ಕಾಯ್ದೆ, 1986ರಡಿಯಲ್ಲಿ ಕಾನೂನು ರೀತ್ಯಾ ಕ್ರಮಕೈಗೊಳ್ಳಲಾಗುವುದು. ಆದ್ದರಿಂದ ಯಾವುದೇ ಕಾರಣಕ್ಕೂ ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ಗಣೇಶ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಬಾರದೆಂದು ಸೂಚಿಸಿಲಾಗಿದೆ.
ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರೀಸ್‍ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸದೆ, ಮನೆಗಳಲ್ಲಿಯೇ ಅರಿಶಿಣ/ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವುದು ಅಥವಾ ಜೇಡಿ ಮಣ್ಣಿನಿಂದ ತಯಾರಿಸಿದ ಮತ್ತು ಸಾಧ್ಯವಾದಷ್ಟು ಗರಿಷ್ಠ 2 ಅಡಿ ಎತ್ತರದ ಬಣ್ಣ ರಹಿತ ಅಥವಾ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಖರೀದಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಪ್ರಸ್ತುತ ಸಾಲಿನಲ್ಲಿ ಆಚರಿಸುವ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಶಬ್ಧ ಮಾಲಿನ್ಯದ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಿ ಶೂನ್ಯ ಪ್ರಮಾಣಕ್ಕೆ ಇಳಿಸುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಸಿ.ಎನ್ ಮಂಜಪ್ಪ ಇವರು ಕೋರಿದ್ದಾರೆ .