ಹೊನ್ನಾಳಿ:
ರಕ್ತದಾನದಿಂದ ಒಂದು ಜೀವವನ್ನು ಉಳಿಸಬಹುದು. ಆದ್ದರಿಂದ, ಎಲ್ಲರೂ ರಕ್ತದಾನ ಮಾಡುವ ಮೂಲಕ ಅವಶ್ಯಕತೆ ಇರುವವರಿಗೆ ರಕ್ತ ಲಭಿಸುವಂತೆ ನೋಡಿಕೊಳ್ಳಬೇಕು ಎಂದು ಕೂಲಂಬಿ ಗ್ರಾಪಂ ಉಪಾಧ್ಯಕ್ಷ ಟಿ.ಎಸ್. ಬಸವರಾಜ್ ಹೇಳಿದರು.
ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು ಗದ್ದಿಗೇಶ್ವರ ದೇವಸ್ಥಾನದ ಆವರಣದಲ್ಲಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಕೂಲಂಬಿ ಗ್ರಾಮದ ಹಿಂದೂ ಯುವ ಶಕ್ತಿ ಒಕ್ಕೂಟದ ವತಿಯಿಂದ ಗುರುವಾರ ಹಮ್ಮಿಕೊಂಡ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಕುರಿತಂತೆ ಕೆಲವರು ಇಲ್ಲ-ಸಲ್ಲದ ಸುಳ್ಳುಗಳನ್ನು ಹೇಳುತ್ತಾರೆ. ಯಾರೂ ಅವುಗಳನ್ನು ನಂಬಬಾರದು. ರಕ್ತದಾನಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ. ಎಲ್ಲರೂ ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ತುರ್ತು ಅಗತ್ಯ ಉಳ್ಳವರಿಗೆ ರಕ್ತ ಅತ್ಯವಶ್ಯಕವಾಗಿದೆ. 2020ರ ಮಾರ್ಚ್ ಬಳಿಕ ಮಾರಕ ಕೊರೊನಾ ಕಾಯಿಲೆಯ ನಂತರ ಅನೇಕರು ರಕ್ತದಾನ ಮಾಡಲು ಹಿಂಜರಿಯುತ್ತಿದ್ದರು. ಹಾಗಾಗಿ ರಕ್ತದ ಕೊರತೆ ಉಂಟಾಗಿತ್ತು. ಇದೀಗ ಕೊರೊನಾ ಭೀತಿ ಇಲ್ಲವಾಗಿದೆ. ಆದ್ದರಿಂದ, ಈಗಲಾದರೂ ಕೊರೊನಾ ಭೀತಿಯಿಂದ ಹೊರಬಂದು ಎಲ್ಲರೂ ರಕ್ತದಾನಕ್ಕೆ ಮುಂದಾಗಬೇಕು ಎಂದು ಹೇಳಿದರು.
ವ್ಯಕ್ತಿಯ ರಕ್ತದಲ್ಲಿನ ಕೆಂಪು ರಕ್ತ ಕಣಗಳ ಆಯುಷ್ಯ 120 ದಿನಗಳಷ್ಟು ಆಗಿದೆ. ಹಾಗಾಗಿ, ನಾವು ರಕ್ತದಾನ ಮಾಡದಿದ್ದರೂ ದೇಹದಲ್ಲಿನ ರಕ್ತದ ಕೆಂಪು ರಕ್ತ ಕಣಗಳು ತಮ್ಮ ಆಯುಷ್ಯದ ಬಳಿಕ ನಾಶವಾಗುತ್ತವೆ. ಅಲ್ಲದೇ, ರಕ್ತದಾನ ಮಾಡಿದರೆ ದೇಹದಲ್ಲಿನ ರಕ್ತ ಶುದ್ಧೀಕರಣ ಪ್ರಕ್ರಿಯೆ ಸುಗಮವಾಗಿ ಆಗುತ್ತದೆ. ಆದ್ದರಿಂದ, ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ರಕ್ತದ ಸದ್ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ವಿವರಿಸಿದರು.
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ವೈದ್ಯೆ ಡಾ. ಅನುಷ, ಕೂಲಂಬಿ ಗ್ರಾಮದ ಸಿದ್ಧೇಶ್, ಗುರುಮೂರ್ತಿ, ಟಿ.ಎನ್. ಮಂಜುನಾಥ್, ಬಿ.ಎಂ. ಯುವರಾಜ್, ಎಚ್.ಬಿ. ಮಂಜುನಾಥ್, ಎಚ್.ಬಿ. ಯುವರಾಜ್, ಹಾಲಸ್ವಾಮಿ, ಶಿವಕುಮಾರ್ ಇತರರು ಇದ್ದರು.
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರ, ದಾವಣಗೆರೆ ನಗರದ ಚಾಮರಾಜಪೇಟೆಯ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಕೂಲಂಬಿ ಗ್ರಾಮದ ಹಿಂದೂ ಯುವ ಶಕ್ತಿ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 23ಕ್ಕೂ ಅಧಿಕ ಯುವಕರು ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.