ದಾವಣಗೆರೆ: ನಲವತ್ತು ವರ್ಷಗಳ ಹಿಂದೆ ಬರೆದ ಕಾದಂಬರಿ ಒಂದರಲ್ಲಿ ರಾಷ್ಟ್ರ ಗೀತೆಗೆ ಅವಮಾನ ಮಾಡಿದ್ದಾರೆಂದು ಲೇಖಕ ಬರಗೂರು ರಾಮಚಂದ್ರಪ್ಪ ಅವರ ವಿರುದ್ಧ ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮತ್ತಿತರರು ಪೋಲಿಸರಿಗೆ ದೂರು ನೀಡಿರುವುದು ಹಾಸ್ಯಾಸ್ಪದ ಎಂದು ದಾವಣಗೆರೆ ಜಿಲ್ಲಾ ಬಂಡಾಯ ಸಾಹಿತ್ಯ ಸಂಘಟನೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಮುಖಂಡರು ಬರಗೂರು ರಾಮಚಂದ್ರಪ್ಪ ಅವರು ವಿಡಂಬನೆ ಶೈಲಿಯಲ್ಲಿ ಕಾದಂಬರಿ ರಚಿಸಿದ್ದು ವ್ಯವಸ್ಥೆಯ ವಿರುದ್ಧ ಕಾದಂಬರಿಯ ನಾಯಕನ ಮೂಲಕ ಆಕ್ರೋಶದ ಮಾತುಗಳನ್ನಾಡಿಸಿದ್ದಾರೆ. ಅದೊಂದು ಪಾತ್ರ ಎಂದು ನೋಡಬೇಕೇ ವಿನಹ ಬೇರೆ ಅರ್ಥ ಕಲ್ಪಿಸುವುದು ಸರಿಯಲ್ಲ. ನೂರಾರು ಲೇಖಕರು ತಮ್ಮ ಕತೆ ಕಾದಂಬರಿಗಳಲ್ಲಿ ಚಿತ್ರಿಸಿರುವ ಪಾತ್ರಗಳು ಕಾಲ್ಪನಿಕವಾಗಿರುತ್ತವೆ.. ಅವನ್ನು ಬೇರಾವುದಕ್ಕೋ ಜೋಡಿಸುವುದು ತಪ್ಪು. ಇಲ್ಲಿ ಕೃತಿಯ ಆಶಯ ಮುಖ್ಯವೇ ಹೊರತು ಪಾತ್ರಗಳ ಮಾತು, ಗುಣ ಲಕ್ಷಣಗಳಲ್ಲ. ಹೀಗಿದ್ದೂ ಬರಗೂರು ಅವರು ತಮ್ಮ ಸಮಗ್ರ ಸಂಪುಟ ತರುವಾಗ ಆ ಕಾದಂಬರಿಯಲ್ಲಿ ಹಲವು ತಿದ್ದುಪಡಿ ಮಾಡಿದ್ದಾರೆ. ರವಿಕುಮಾರ್ ಅವರು ಇಲ್ಲದ್ದನ್ನು ಇದೆ ಎಂದು ಸಾಬೀತು ಪಡಿಸಲು ಹೋಗುವ ಬದಲು ತೆರೆದ ಕಣ್ಣಿನಿಂದ, ಒಳ್ಳೆಯ ಮನಸ್ಸಿನಿಂದ ಸಾಹಿತ್ಯ ಕೃತಿಗಳನ್ನು ಓದಲಿ. ಸರ್ಕಾರ ರಾಮಚಂದ್ರಪ್ಪ ಅವರ ವಿರುದ್ಧ ನೀಡಿರುವ ದೂರಿಗೆ ಮಹತ್ವ ಕೊಡದಿರಲಿ ಎಂದು ಜಿಲ್ಲಾ ಸಂಚಾಲಕ ರಾದ ಪ್ರೊ.ಎ.ಬಿ. ರಾಮಚಂದ್ರಪ್ಪ, ಬಿ.ಎನ್ ಮಲ್ಲೇಶ್, ಲೇಖಕರಾದ ಡಾ. ಎಂ.ಜಿ.ಈಶ್ವರಪ್ಪ, ಜೆ.ಕಲೀಂಭಾಷಾ, ಸತ್ಯಭಾಮಾ ಮಂಜುನಾಥ್, ದಾದಾಪೀರ್ ನವಿಲೇಹಾಳ್, ಮಲ್ಲಿಕಾರ್ಜುನ ಕಡಕೋಳ, ಬಾಮ. ಬಸವರಾಜಯ್ಯ, ಮಲ್ಲಿಕಾರ್ಜುನ ಕಲಮರಳ್ಳಿ ಮುಂತಾದವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *