ಹುಣಸಘಟ್ಟ: ಗೌರಿ-ಗಣೇಶನ ಹಬ್ಬದೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಮನೆಗಳಲ್ಲಿ ಕಟ್ಟುನಿಟ್ಟಿನಿಂದ ಎಳೆಗೌರಿ ಹಬ್ಬವನ್ನು ಆಚರಿಸುತ್ತಾರೆ. ಎಳೆ ಗೌರಿಯನ್ನು ಪೂಜಿಸಿದರೆ ತಮ್ಮ ಮನೆತನದ ಸಮೃದ್ಧಿಯು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಹೋಟ್ಯಾಪುರ ಸೇರಿದಂತೆ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಸೋಮವಾರ ವೈಶಿಷ್ಟ್ಯಪೂರ್ಣವಾಗಿ ಎಳೆ ಗೌರಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲಿದ್ದಾರೆ.
ಭಾದ್ರಪದ ಮಾಸದಲ್ಲಿ ಫಲಗಳು ವೃದ್ಧಿಸುತ್ತವೆ ವೃದ್ಧಿಸುವ ಕಾಲದಲ್ಲಿ ಎಳೆ ಗೌರಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು ತಮ್ಮ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಎಳೆಯು ಲಕ್ಷ್ಮಿಯ ಸಂಕೇತ ನೀತಿ-ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿ ಪೂಜಿಸಿದರೆ ಒಳ್ಳೆಯದಾಗುತ್ತದೆ ಎನ್ನುತ್ತಾರೆ ಹೊಟ್ಯಾಪುರ ಹಿರೇಮಠದ ಶ್ರೀ ಗಿರಿ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಯವರು.
ಮಠಗಳಲ್ಲಿ ಎಳೆಗೌರಿ ಮಾಡಿಕೊಡುವುದು ವಿರಳ. ಬಹಳಷ್ಟು ಜನರು ಎಳೆಗೌರಿ ಅನ್ನು ದೇವಸ್ಥಾನದಲ್ಲಿ ಮಾಡಿಕೊಳ್ಳುತ್ತಾರೆ. ಆದರೆ ಶ್ರೀಮಠದಲ್ಲಿ ನೂರಾರು ವರ್ಷಗಳಿಂದ ಹಬ್ಬ ಆಚರಿಸುವ ಭಕ್ತರು ನೀಡಿದ ಹತ್ತಿಯಿಂದ ಕೈಯಲ್ಲಿಯೇ ಎಳೆ ಗೌರಿಯನ್ನು ನಿಯಮಾನುಸಾರವಾಗಿ ಮಾಡಿಕೊಡಲಾಗುತ್ತದೆ. ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನರು ಒಂಟಿ ಎಳೆ, ಜೋಡಿ ಎಳೆ ಮಾಡಿಸಿ ಪೂಜಿಸಿಕೊಂಡು ಹೋಗುತ್ತಾರೆ. ಉಜ್ಜನಿ ಶಾಕಾ ಮಠವಾಗಿರುವ ಇದರ ಶಕ್ತಿದೇವತೆ ಗೌರಿ. ಆದ್ದರಿಂದ ಎಳೆಗೌರಿ ಯನ್ನು ಜನರ ಸಹಕಾರದಿಂದ ಸ್ಥಾಪಿಸಿ ಲೋಕಕಲ್ಯಾಣಕ್ಕಾಗಿ ಪೂಜಿಸಲಾಗುವುದು ಎಂದರು.
ಮೂಲಾ ನಕ್ಷತ್ರದಲ್ಲಿ ಆಚರಿಸುವ ಎಳೆಗೌರಿ ಹಬ್ಬದ ದಿನ ಮನೆಯ ಒಡತಿಯು ಬೆಳಗಿನಿಂದ ಉಪವಾಸವಿದ್ದು 25ಕ್ಕೂ ಹೆಚ್ಚು ಬಗೆಯ ನೈವೇದ್ಯಗಳನ್ನು ಸಿದ್ಧಪಡಿಸುವುದು ರಾತ್ರಿ ಜಂಗಮಾರ್ಚನೆಯ ನಂತರ ತಾಯಿಗೆ ನೈವೇದ್ಯ ಮಾಡಿ ಸಹ ಕುಟುಂಬದವರೊಂದಿಗೆ ನೈವೇದ್ಯವನ್ನು ಸ್ವೀಕರಿಸುವರು. ಇದು ಬಹಳ ಕಟ್ಟುನಿಟ್ಟಿನ ವ್ರತ ಎಳೆ ತರುವಾಗ ಬೇರೆಯವರೊಂದಿಗೆ ಮಾತನಾಡುವಂತಿಲ್ಲ ಎನ್ನುತ್ತಾರೆ ಮಠದ ಭಕ್ತರಾದ ಹುಣಸಘಟ್ಟ ಗ್ರಾಮದ ಜಿಪಂ ಮಾಜಿ ಅಧ್ಯಕ್ಷ ಶೀಲ ಗದ್ದಿಗೇಶ್ವರ ವರು.
ಹತ್ತಿ ಹಬ್ಬ : ಇಂದು ಭಾನುವಾರ ಬೆಳಿಗ್ಗೆ ಹತ್ತಿ ಹಬ್ಬದ ಅಂಗವಾಗಿ ಹೊಟ್ಯಾಪುರ ಹಿರೇಮಠದಲ್ಲಿ ಕರ್ತೃಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಿದ ನಂತರ ಮುತ್ತೈದೆಯರು ಎಳೆ ಗೌರಿಯನ್ನು ಹೊಳೆ ಪೂಜೆ ನೆರವೇರಿಸಿ ಜಾನಪದ ಕಲಾ ಮೇಳಗಳೊಂದಿಗೆ ರಾಜಬೀದಿ ಮೆರವಣಿಗೆಯ ಮೂಲಕ ಶ್ರೀಮಠದಲ್ಲಿ ಸ್ಥಾಪಿಸಲಾಯಿತು. ಸೋಮವಾರ ಬೆಳಿಗ್ಗೆ ಎಳೆ ವಿತರಣೆ, ಅಂದು ರಾತ್ರಿ ಧರ್ಮ ಸಭೆ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.