ಹೊನ್ನಾಳಿ:
ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆದು ಸಂಸ್ಕಾರವಂತರಾಗಿ ಬಾಳ್ವೆ ನಡೆಸಬೇಕು ಎಂದು ಹೊನ್ನಾಳಿಯ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮುಕ್ತೇನಹಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ವರ ಮಹಾಲಕ್ಷ್ಮೀ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಹಿಂದೂ ಸಂಪ್ರದಾಯದಲ್ಲಿ ಪೂಜೆ, ವ್ರತಗಳು ಧಾರ್ಮಿಕ ಭಾವನೆಯನ್ನು ಬೆಳೆಸುತ್ತವೆ. ಧಾರ್ಮಿಕತೆ ಮನಸ್ಸಿಗೆ ಶಾಂತಿ, ನೆಮ್ಮದಿ ಉಂಟುಮಾಡುತ್ತದೆ. ಆದ್ದರಿಂದ, ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಿರಿಯ ನಿರ್ದೇಶಕ ವಿಜಯಕುಮಾರ ನಾಗನಾಳ ಉದ್ಘಾಟನೆ ನೆರವೇರಿಸಿ ಮಾತನಾಡಿ, ಸಮಾಜದಲ್ಲಿ ಉತ್ತಮ ಬದುಕು ನಡೆಸಲು ಮನುಷ್ಯನಿಗೆ ಸಂಸ್ಕಾರ ಅತಿ ಮುಖ್ಯ. ಪೂಜೆ-ಪುನಸ್ಕಾರಗಳಲ್ಲಿ ಪಾಲ್ಗೊಳ್ಳುವುದರಿಂದ ಸಂಸ್ಕಾರ ಲಭಿಸುತ್ತದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಜಿ.ಬಿ. ಯೋಗೀಶ್, ಸುರೇಶ್ ಹೊಸಕೇರಿ, ಕುಮಾರಸ್ವಾಮಿ, ಗ್ರಾಪಂ ಅಧ್ಯಕ್ಷೆ ಯಶೋಧ ಮಹಾಂತೇಶ್, ಉಪಾಧ್ಯಕ್ಷರು-ಸದಸ್ಯರು, ಗ್ರಾಮಸ್ಥರು ಇದ್ದರು.
ಸಮಾರಂಭದಲ್ಲಿ 611 ಮುತ್ತೈದೆಯರಿಗೆ ಉಡಿ ತುಂಬಲಾಯಿತು.