ದಾವಣಗೆರೆ: ಅನ್ನದಾನ, ವಿದ್ಯಾದಾನ ಅಂತೆಯೇ ರಕ್ತದಾನವೂ ಸಹ ಶ್ರೇಷ್ಠವಾದದು. ಒಬ್ಬ ಆರೋಗ್ಯವಂತಹ ಮನುಷ್ಯ ರಕ್ತದಾನ ಮಾಡುವುದರಿಂದ ಅಮೂಲ್ಯ ಜೀವಗಳನ್ನು ಉಳಿಸಬಹುದು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಕರೆ ನೀಡಿದ್ದಾರೆ.

ಎಸ್.ಎಸ್ ಮಲ್ಲಿಕಾರ್ಜುನರವರ 55ನೇ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಬೃಹತ್ ರಕ್ತದಾನ ಅಭಿಯಾನದಲ್ಲಿ ಸಂಗ್ರಹಿಸಿರುವ ರಕ್ತ ಕಣಗಳ ಯೂನಿಟ್‍ನ್ನು ಇಂದು ಅರ್ಹ ರೋಗಿಗಳ ಸಂಬಂಧಿಕರಿಗೆ ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಪ್ರತಿ ತಿಂಗಳು ಕನಿಷ್ಠ 800-900 ಜನರಿಗೆ ರಕ್ತದ ಅವಶ್ಯಕತೆ ಇದ್ದು, 500-600 ದಾನಿಗಳು ಪ್ರತಿತಿಂಗಳು ರಕ್ತದಾನ ಮಾಡುತ್ತಿದ್ದು, ಇದರಿಂದ ಅವಶ್ಯಕತೆ ಇರುವ ಹಲವರಿಗೆ ರಕ್ತ ಸಿಗದೇ ಸಮಸ್ಯೆ ಎದುರಾಗುತ್ತಿದೆ.

ಇದನ್ನು ಮನಗಂಡು ಎಸ್.ಎಸ್.ಎಂ ಅಭಿಮಾನಿ ಬಳಗದ ವತಿಯಿಂದ ಮಾಜಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನರವರ 55ನೇ ಜನ್ಮದಿನದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾದ್ಯ್ಯಂತ ಬೃಹತ್ ರಕ್ತದಾನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, 5555 ಎಸ್.ಎಸ್.ಎಂ ಅಭಿಮಾನಿ ರಕ್ತದಾನಿಗಳಿಂದ ರಕ್ತ ಸಂಗ್ರಹಿಸುವ ದಾಖಲೆಯ ಯೋಜನೆ ರೂಪಿಸಲಾಗಿದೆ.

ಈ ನಿಟ್ಟಿನಲ್ಲಿ ಈಗಾಗಲೇ ರಕ್ತ ಸಂಗ್ರಹಕ್ಕಾಗಿ ರಕ್ತದಾನ ಶಿಬಿರಗಳನ್ನು ಪ್ರಾರಂಭಿಸಲಾಗಿದ್ದು, ಈ ಶಿಬಿರದಲ್ಲಿ ಸಂಗ್ರಹವಾಗಿರುವ ರಕ್ತವನ್ನು ಅವಶ್ಯಕತೆ ಇರುವ ಪ್ರತಿಯೊಬ್ಬರಿಗೂ ಪರೀಕ್ಷಾ ಶುಲ್ಕ (ಕೆಂಪು ರಕ್ತಕಣಕ್ಕೆ 900 ರೂ.ಗಳನ್ನು ಹಾಗೂ ಬಿಳಿ ರಕ್ತಕಣ ಮತ್ತು ಪ್ಲಾಸ್ಮಾಗೆ 600 ರೂ.ಗಳನ್ನು) ವನ್ನು ಪಡೆಯದೇ ಉಚಿತವಾಗಿ ವಿತರಿಸಲು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಿರ್ಧರಿಸಿದ್ದು, ಇಂದು ಐವರಿಗೆ ಕೆಂಪುರಕ್ತ ಕಣ ಹಾಗೂ ಇಬ್ಬರಿಗೆ ಬಿಳಿ ರಕ್ತ ಕಣದ ಯೂನಿಟ್‍ಗಳನ್ನು ನೀಡಲಾಗಿದೆ ಎಂದು ಬಾಪೂಜಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ|| ಎಸ್.ಕುಮಾರ್ ಅವರು ತಿಳಿಸಿದರು.

ಸಾರ್ವಜನಿಕರು ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಇನ್ನೊಬ್ಬರ ಜೀವವನ್ನು ಸಹ ಉಳಿಸಬಹುದು ಎಂಬುದನ್ನು ತಿಳಿದು ಆರೋಗ್ಯವಂತರು ಕನಿಷ್ಟ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಅದರಲ್ಲೂ ಯುವಕರು-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕೆಂದು ಎಸ್.ಎಸ್.ಎಂ ಅಭಿಮಾನಿ ಬಳಗದವರು ವಿನಂತಿಸಿದ್ದಾರೆ.

ಇದೇ ವೇಳೆ ಚರ್ಮರೋಗ ತಜ್ಞರಾದ ಡಾ|| ರಾಜಶೇಖರ್ ನಾಡಿಗ್ ಅವರು ರಕ್ತದಾನ ಮಾಡಿದರು.

ಈ ಬೃಹತ್ ರಕ್ತದಾನ ಅಭಿಯಾನಕ್ಕೆ ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬಾಪೂಜಿ ಆಸ್ಪತ್ರೆ, ಬಾಪೂಜಿ ರಕ್ತ ನಿಧಿ ಕೇಂದ್ರ ಹಾಗೂ ಎಸ್.ಎಸ್.ವೈದ್ಯಕೀಯ ಮಹಾವಿದ್ಯಾಲಯ ಮತ್ತು ಎಸ್.ಎಸ್. ಆಸ್ಪತ್ರೆ ಮತ್ತು ಎಸ್.ಎಸ್. ರಕ್ತ ನಿಧಿ ಕೇಂದ್ರದವರು ಕೈಜೋಡಿಸಿದ್ದು, ಸಾರ್ವಜನಿಕರು ಸಹ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಜೆ.ಜೆ.ಎಂ.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ಎಸ್.ಬಿ.ಮುರುಗೇಶ್, ಬಾಪೂಜಿ ರಕ್ತ ನಿಧಿ ಕೇಂದ್ರದ ಜಗದೀಶ್ವರಿ, ಡಾ|| ನಿಕೇತನ್, ವರದರಾಜ್ ಕುಲಕರ್ಣಿ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *