ಹೊನ್ನಾಳಿ:
ವಚನ ಸಾಹಿತ್ಯವನ್ನು ವಿಶ್ವದ ಎಲ್ಲೆಡೆ ಪಸರಿಸಲು ತರಳಬಾಳು ಬೃಹನ್ಮಠ ತಂತ್ರಜ್ಞಾನವನ್ನು ಸಮರ್ಥವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಸಮಾರಂಭದ ಭಕ್ತಿ ಸಮರ್ಪಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವಚನ ಸಾಹಿತ್ಯವನ್ನು ವಿಶ್ವದ ಎಲ್ಲೆಡೆ ಪಸರಿಸಲು ನಾವು ಒಂದು ಆಪ್ ಅಭಿವೃದ್ಧಿಗೊಳಿಸಿದ್ದೇವೆ. ವಚನಡಾಟ್‍ತರಳಬಾಳುಡಾಟ್‍ಇನ್‍ನಲ್ಲಿ ನಿಮಗಿಷ್ಟವಾದ ವಚನದ ಮೊದಲ ಸಾಲನ್ನು ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್‍ಗಳಲ್ಲಿ ಟೈಪ್ ಮಾಡಿದರೆ ವಚನವನ್ನು ಆಲಿಸಬಹುದು. ಈಗಾಗಲೇ 22 ಸಾವಿರ ವಚನಗಳನ್ನು ಈ ಆಪ್‍ನಲ್ಲಿ ಅಳವಡಿಸಲಾಗಿದೆ. ಇದರಿಂದ ವಿಶ್ವದ ಯಾವುದೇ ಮೂಲೆಯಲ್ಲಿರುವವರು ಕೂಡ ವಚನ ಸಾಹಿತ್ಯದ ಸುಧೆ ಸವಿಯಬಹುದು ಎಂದು ತಿಳಿಸಿದರು.


ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಿಗೆ ಮದುವೆ ಮಾಡುವ ವಿಷಯ ಪೋಷಕರಿಗೆ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಇದನ್ನು ಮನಗಂಡು ನಾವು “ತರಳಬಾಳು ಮ್ಯಾಟ್ರಿಮನಿ” ಸೇವೆಯನ್ನು ಪ್ರಾರಂಭಿಸಿದ್ದೇವೆ. ವಿವಾಹವಾಗಲು ಇಚ್ಛಿಸುವವರು ಪ್ಲೇ ಸ್ಟೋರ್‍ಗೆ ಭೇಟಿ ನೀಡಿ ತಮ್ಮ ಹೆಸರು, ವಿವರ ಇತ್ಯಾದಿಗಳನ್ನು ನೋಂದಾವಣಿ ಮಾಡಿಕೊಂಡರೆ ಪ್ರಯೋಜನ ಪಡೆದುಕೊಳ್ಳಬಹುದು. “ತರಳಬಾಳು ಮ್ಯಾಟ್ರಿಮನಿ” ಸೇವೆಯನ್ನು ಪ್ರಾರಂಭಿಸಿ ಇದೀಗ ಒಂದು ತಿಂಗಳಾಗಿದೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ. ವಿವಾಹವಾಗಲು ಇಚ್ಛಿಸುವವರ ಮಾಹಿತಿ ಬೇರೆ ವಾಟ್ಸಾಪ್ ಬಳಕೆದಾರರಿಗೆ ಲಭಿಸುವುದಿಲ್ಲ. ಹಾಗೆ ಅದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಿವರಿಸಿದರು.


ಸಿರಿಗೆರೆ ಬೃಹನ್ಮಠದ ಲಿಂ. ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಮಾಜದ ಎಲ್ಲರ ಏಳಿಗೆಗಾಗಿ ತಮ್ಮ ಜೀವನವನ್ನೇ ಧಾರೆ ಎರೆದಿದ್ದರು. ಅಂಥ ಗುರುಗಳನ್ನು ಪಡೆದ ನಾವೆಲ್ಲರೂ ಧನ್ಯರು. ಸಮಾಜದಲ್ಲಿನ ಬಹುತೇಕ ಜನರು ಅಂದಿನ ದಿನಗಳಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದುದನ್ನು ಮನಗಂಡ ಶಿವಕುಮಾರ ಮಹಾಸ್ವಾಮಿಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಎಲ್ಲರಿಗೂ ಸುಲಭವಾಗಿ ಶಿಕ್ಷಣ ಸೌಲಭ್ಯ ದೊರೆಯುವಂತೆ ಮಾಡಿದರು. ಆ ಮೂಲಕ ಸಮಾಜದ ಎಲ್ಲರೂ ತಮ್ಮ ಬದುಕು ಕಟ್ಟಿಕೊಳ್ಳಲು ಅವಶ್ಯಕವಾದ ವೇದಿಕೆ ನಿರ್ಮಿಸಿದರು ಎಂದು ತಿಳಿಸಿದರು.


ಶಿವಕುಮಾರ ಮಹಾಸ್ವಾಮಿಗಳು ಅಂದಿನ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ವಾಣಿಜ್ಯಕ ಸಮಾನತೆಗೆ ಬಹುವಾಗಿ ಶ್ರಮಿಸಿದರು. ಯಾರಿಗೆ ಯಾವ ಕ್ಷೇತ್ರದಲ್ಲಿ ಆಸ್ಥೆ ಇರುತ್ತದೋ ಅವರಿಗೆ ಆಯಾ ಕ್ಷೇತ್ರಗಳಲ್ಲಿ ಮುಂದುವರೆಯುವಂತೆ ಪ್ರೇರೇಪಿಸಿದರು. ಶಿವಕುಮಾರ ಮಹಾಸ್ವಾಮಿಗಳ ಅಧಿಕಾರಾವಧಿ ನಂತರ ತಾವು ಪಟ್ಟಕ್ಕೆ ಬಂದ ಮೇಲೆ ಅವರ ಮಾರ್ಗದರ್ಶನದಲ್ಲೇ ಮುಂದುವರೆಯುತ್ತಿದ್ದು, ಶಿಕ್ಷಣ ಸಂಸ್ಥೆಗಳ ಆಧುನೀಕರಣಕ್ಕೆ ಮುಂದಾಗಿರುವುದಾಗಿ ವಿವರಿಸಿದರು.


ತಮ್ಮ ಹಲವಾರು ಸಮಾಜಮುಖಿ, ವಿಭಿನ್ನ-ವಿಧಾಯಕ ಕಾರ್ಯಕ್ರಮಗಳ ಮೂಲಕ ನಮ್ಮ ಗುರುಗಳಾದ ಶಿವಕುಮಾರ ಮಹಾಸ್ವಾಮಿಗಳು ಸಮಾಜವನ್ನು ಬಾಧಿಸುತ್ತಿದ್ದ ಜಾತಿ ಪದ್ಧತಿ, ಅಜ್ಞಾನ, ಅಂಧ ಶ್ರದ್ಧೆ ಮತ್ತಿತರ ಸಾಮಾಜಿಕ ಅನಿಷ್ಟಗಳಿಂದ ಸಮಾಜವನ್ನು ಹೊರತಂದರು. ಈ ಕಾರಣಕ್ಕೆ ನಾವೆಲ್ಲರೂ ಅವರಿಗೆ ಸದಾ ಋಣಿಗಳಾಗಿದ್ದೇವೆ ಎಂದು ತಿಳಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಸಿರಿಗೆರೆ ತರಳಬಾಳು ಬೃಹನ್ಮಠ ತನ್ನ ಅನನ್ಯ ಸಮಾಜಮುಖಿ ಕಾರ್ಯಗಳಿಂದ ಜನಮನ್ನಣೆ ಗಳಿಸಿದೆ. ಸಿರಿಗೆರೆಯಲ್ಲಿ ನಡೆಯುವ ನ್ಯಾಯದಾನ ಅನುಪಮವಾದುದು. ಎಷ್ಟೋ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದ ಸಮಸ್ಯೆಗಳು ಅಲ್ಲಿ ಪರಿಹಾರವಾಗುತ್ತವೆ. ಆ ನಿಟ್ಟಿನಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಕಾರ್ಯ ಆದರ್ಶವಾದುದು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಬದುಕನ್ನು ಸಾರ್ಥಕಪಡಿಸಿಕೊಳ್ಳೋಣ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ ಭಕ್ತಿ ಸಮರ್ಪಣಾ ಸಮಾರಂಭಕ್ಕೆ ಮಾಜಿ ಶಾಸಕರೂ, ನಮ್ಮ ದೊಡ್ಡಪ್ಪನವರಾದ ಡಿ.ಜಿ. ಬಸವನಗೌಡ ಅವರೇ ಪ್ರೇರಣೆ. ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯುತ್ತಿದ್ದೇವೆ ಎಂದು ತಿಳಿಸಿದರು.


ತಾಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಹುಣಸಘಟ್ಟ ಎಚ್.ಎ. ಗದ್ದಿಗೇಶ್ ಮಾತನಾಡಿ, ಹೊನ್ನಾಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ತರಳಬಾಳು ಸಮುದಾಯ ಭವನಕ್ಕೆ ಅಧಿಕ ಹಣದ ಅವಶ್ಯಕತೆ ಇದೆ. ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಈಗಾಗಲೇ 50 ಲಕ್ಷ ರೂ.ಗಳಷ್ಟು ಧನಸಹಾಯ ಒದಗಿಸಿದ್ದಾರೆ. ಇನ್ನೂ ಹೆಚ್ಚಿನ ಧನಸಹಾಯ ಒದಗಿಸುವ ಮೂಲಕ ನಮ್ಮನ್ನು ಹರಸಬೇಕು ಎಂದು ವಿನಂತಿಸಿದರು.
ಮುಂದಿನ ವರ್ಷ ಯರಗನಾಳು ಗ್ರಾಮದಲ್ಲಿ: ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ ಭಕ್ತಿ ಸಮರ್ಪಣಾ ಸಮಾರಂಭ ಮುಂದಿನ ವರ್ಷ ನ್ಯಾಮತಿ ತಾಲೂಕಿನ ಯರಗನಾಳು ಗ್ರಾಮದಲ್ಲಿ ನಡೆಸುವುದಾಗಿ ಹುಣಸಘಟ್ಟ ಎಚ್.ಎ. ಗದ್ದಿಗೇಶ್ ತಿಳಿಸಿದರು. ತಾಲೂಕಿನ ಎಂ. ಹನುಮನಹಳ್ಳಿ ಮತ್ತು ನ್ಯಾಮತಿ ತಾಲೂಕಿನ ಯರಗನಾಳು ಗ್ರಾಮಸ್ಥರು ಮುಂದಿನ ವರ್ಷದ ಸಮಾರಂಭವನ್ನು ನಡೆಸಲು ತಮಗೆ ಅವಕಾಶ ನೀಡಬೇಕು ಎಂದು ಕೋರಿಕೆ ಸಲ್ಲಿಸಿದ್ದರು. ಮುಂದಿನ ವರ್ಷ ನ್ಯಾಮತಿ ತಾಲೂಕಿನ ಯರಗನಾಳು ಗ್ರಾಮದಲ್ಲಿ ನಡೆಸುವುದಾಗಿ ತಿಳಿಸುತ್ತಿದ್ದಂತೆ ಯರಗನಾಳು ಗ್ರಾಮಸ್ಥರು ಹರ್ಷಚಿತ್ತರಾದರು. ತಮ್ಮ ಗ್ರಾಮಕ್ಕೆ ಅವಕಾಶ ದೊರೆತ ಹಿನ್ನೆಲೆಯಲ್ಲಿ ಸಮಾರಂಭದ ಆವರಣದಲ್ಲೇ ಯರಗನಾಳು ಗ್ರಾಮಸ್ಥರು ಪಟಾಕಿ ಸಿಡಿಸಿ ಸಂಭ್ರಮಿಸಿದರು.


ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬಸವನಗೌಡ, ನಗೆ ಭಾಷಣಕಾರ್ತಿ ಡಾ. ಇಂದುಮತಿ ಸಾಲಿಮಠ, ಟಿ.ಎಸ್. ರಾಜಶೇಖರ್ ಇತರರು ಮಾತನಾಡಿದರು.
ನ್ಯಾಮತಿ ತಾಲೂಕು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಶಿವಪ್ಪ, ಹೊನ್ನಾಳಿ ತಾಲೂಕು ಸಾಧು ಲಿಂಗಾಯತ ಸಮಾಜದ ಉಪಾಧ್ಯಕ್ಷ ಕೂಲಂಬಿ ಹಾಲೇಶಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಜಿ. ವಾಮದೇವಪ್ಪ, ಡಿ.ಎಸ್. ಪ್ರದೀಪ್‍ಗೌಡ, ಟಿ.ಎಸ್. ಸೋಮಶೇಖರಪ್ಪ, ಕೂಲಂಬಿ ಗ್ರಾಮಸ್ಥರು ಇದ್ದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು.

Leave a Reply

Your email address will not be published. Required fields are marked *