ಹುಣಸಘಟ್ಟ ಗ್ರಾಮೀಣ ಪ್ರದೇಶದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಕಾಲಕಾಲಕ್ಕೆ ಅಗತ್ಯ ಸಾಲ ನೀಡುವ ಮೂಲಕ ರೈತರ ಜೀವನಾಡಿಯಾಗಿದೆ ಎಂದು ಹನಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್ ಎಂ ರಾಘವೇಂದ್ರ ಹೇಳಿದರು
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹನಗವಾಡಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ನಡೆದ 2021- 22 ನೇ ಸಾಲಿನ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ರೈತರು ಸಹಕಾರ ಸಂಘಗಳನ್ನು ನಂಬಿ ಬದುಕುತ್ತಿದ್ದಾರೆ. ಸರ್ಕಾರ ಕೂಡ ಇವರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತಿದ್ದು ಇದನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳಬೇಕು. ಸಂಘದಿಂದ ಸಾಲ ಪಡೆದ ರೈತರು ಹೈನುಗಾರಿಕೆ ಹಾಗೂ ನೀರಾವರಿ ಸೇರಿದಂತೆ ಇನ್ನಿತರ ಚಟುವಟಿಕೆಗೆ ಹಣ ಬಳಸಿಕೊಳ್ಳಬೇಕು ಎಂದರು.
ರೈತ ಸದಸ್ಯರುಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿ ಮಾತನಾಡಿದ ಸಂಘದ ನಿರ್ದೇಶಕ ಮಲ್ಲೇಶ ಚಾರ್ ನಮ್ಮ ಕೃಷಿ ಪತ್ತಿನ ಸಂಘವು ರೈತರಿಗೆ ಈಗಾಗಲೇ ಕೃಷಿ ಚಟುವಟಿಕೆಗಳಿಗೆ ಕೋಟಿಗಟ್ಟಲೆ ಹಣ ನೀಡಿ ವ್ಯವಹರಿಸುತ್ತಾ ಬಂದಿದೆ. ಈ ಹಿಂದೆ ನಡೆಸಿಕೊಂಡು ಬಂದ ಮಹಾಸಭೆಗಳಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚರ್ಚಿಸದೆ ಬರಿ ಸಾಲ ಪಡೆಯುವುದಕ್ಕೆ ಅಷ್ಟೇ ಸೀಮಿತರಾಗಿದ್ದಾರೆ. ರೈತರು ಸಾಲ ಪಡೆಯುವುದಷ್ಟೇ ಮುಖ್ಯವಲ್ಲ ಪಡೆದ ಸಾಲವನ್ನು ನಿಗದಿತ ಅವಧಿಯೊಳಗೆ ಮರುಪಾವತಿಸಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಬೇಕು. ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹುದ್ದೆ ಖಾಲಿ ಇದ್ದು ಹಾಲಿ ಗುಮಾಸ್ತ ಜೆ ಕೆ ರಾಜು ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ ಎಂದರು.
ಪ್ರಭಾರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜು 2021-22 ನೇ ಸಾಲಿನ ಆಡಳಿತ ವರದಿ, 2022 23 ನೇ ಸಾಲಿಗೆ ದಾವಣಗೆರೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ತರಬಹುದಾದ ವಿವಿಧ ಸಾಲದ ಮೊತ್ತವನ್ನು ಸಭೆಯ ಒಪ್ಪಿಗೆ ಪಡೆದು ಅಂಗೀಕರಿಸಿದರು.
ಸರ್ವ ಸದಸ್ಯರ ಮಹಾಸಭೆಯಲ್ಲಿ ನಿರ್ದೇಶಕ ವೀರೇಶ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಕೃಷ್ಣಪ್ಪ, ರಂಗೋಜಿ ರಾವ್, ಹನುಮಂತಪ್ಪ, ಹಳ್ಳಿ ವಸಂತ, ಎಕ್ಬಾಲ್ ಸಾಬ್, ಕುಸುಮಮ್ಮ, ನೇತ್ರಾವತಿ ಹಾಗೂ ಹನಗವಾಡಿ ಲಿಂಗಾಪುರ ಅವಳಿ ಗ್ರಾಮದ ಸದಸ್ಯರು ಪಾಲ್ಗೊಂಡಿದ್ದರು.