ಶಿಕ್ಷಣ ಮುಗಿಸಿ ಉದ್ಯೋಗ ಪಡೆದು ತಮ್ಮ ಜೀವನ ರೂಪಿಸಿಕೊಳ್ಳುವುದರಲ್ಲಿಯೇ ತಲ್ಲೀನರಾಗಿರುವ ಸಮಾಜದಲ್ಲಿ, ತನಗೆ ವಿದ್ಯೆ ಕಲಿಸಿದ ಶಾಲೆಗೆ ಏನನ್ನಾದರೂ ನೀಡಬೇಕು ಎಂಬ ಭಾವನೆಯಿಂದ 79 ವರ್ಷದ ನಿವೃತ್ತ ಸರ್ಕಾರಿ ಅಭಿಯಂತಕರೊಬ್ಬರು ತನಗೆ ಪ್ರಾಥಮಿಕ ಶಿಕ್ಷಣ ನೀಡಿದ ಶಾಲೆಗೆ ಸ್ವಯಂ ಪ್ರೇರಿತವಾಗಿ ಎಲ್ಇಡಿ ಹಾಗೂ ಡೆಸ್ಕ್ಗಳನ್ನು ನೀಡಿದ ಸಂದರ್ಭಕ್ಕೆ ಪಾಲಿಕೆ 21ನೇ ವಾರ್ಡಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಸಾಕ್ಷಿಯಾಯಿತು.
ಗ್ರಾಮದ ಮಾಜಿ ಚೇರ್ಮನ್ ಕೆ.ಎಸ್. ರೇವಣಸಿದ್ದಪ್ಪ ನವರ ಹಿರಿಯ ಪುತ್ರರಾದ ಸಿದ್ಧನಗೌಡ್ರು ಪ್ರಾಥಮಿಕ ಶಾಲೆಯನ್ನು ಬಸಾಪುರದ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡಿದ್ದರೂ ಮುಂದೆ ಉನ್ನತ ವ್ಯಾಸಂಗವನ್ನು ದಾವಣಗೆರೆ, ಇಂಜಿನಿಯರ್ ವ್ಯಾಸಂಗವನ್ನು ತುಮಕೂರಿನಲ್ಲಿ ಮುಗಿಸಿ ಸರ್ಕಾರಿ ಅಭಿಯಂತರಾಗಿ ಕಾರ್ಯನಿರ್ವಹಿಸಿದರೂ ನಂತರ ಸರ್ಕಾರಿ ಸಹಾಯಕ ಅಭಿಯಂತರರಾಗಿ ನಿವೃತ್ತರಾದ ಇವರು, ತಮ್ಮ ನಿವೃತ್ತಿ ಜೀವನದ ನಂತರ ಸಮಾಜ ಸೇವೆಯಲ್ಲಿ ತೊಡಗಿ ತನಗೆ ವಿದ್ಯೆ ಕಲಿಸಿದ ಶಾಲೆಯ ಮಕ್ಕಳಿಗೆ ಸಹಾಯವಾಗಲಿ ಎಂಬುವ ಆಶಯದಿಂದ ಸುಮಾರು ಒಂದು ಲಕ್ಷ ಮೌಲ್ಯದ ಎಲ್ಇಡಿ ಹಾಗೂ ಡಿಸ್ಕ್ ಗಳನ್ನು ನೀಡಿದ್ದಲ್ಲದೆ ತಾವು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗಿರುವ ಕುಸುಮ ಶೆಟ್ಟರ್ ಅಧ್ಯಕ್ಷತೆಯ ರೋಟರಿ ಕ್ಲಬ್ ವತಿಯಿಂದ ಹೆಚ್ಚಿನ ಡೆಸ್ಕ್ ಗಳನ್ನು ಕೊಡಿಸುವ ಮೂಲಕ ತನಗೆ ವಿದ್ಯೆ ಕಲಿಸಿದ ಶಾಲೆಯ ಋಣ ತೀರಿಸುವ ಪ್ರಯತ್ನ ಮಾಡಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ನಾನಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದು ಒಳ್ಳೆಯ ಸ್ಥಾನದಲ್ಲಿ ಇರುತ್ತಾರೆ, ಅಂತವರು ತಮಗೆ ಪ್ರಾಥಮಿಕ ಶಿಕ್ಷಣ ನೀಡಿದಂತಹ ಶಾಲೆಗಳ ಕಡೆಯೂ ಗಮನಹರಿಸಿ ಅದರ ಅಭಿವೃದ್ಧಿಗೆ ಕಾರಣೀಭೂತರಾಗಲಿ ಎಂಬುದಕ್ಕೆ 79 ವರ್ಷದ ಸಿದ್ಧನಗೌಡ್ರು ಪ್ರೇರಣೆ ಎಂಬುದೇ ಎಲ್ಲರ ಭಾವನೆಯಾಗಿತ್ತು.
ದೇಣಿಗೆ ನೀಡಿದ್ದ ಸಿದ್ಧನಗೌಡ್ರ ಗೆ ಶಾಲೆಯ ವತಿಯಿಂದ ಗೌರವ ಅರ್ಪಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಶಾಲೆಯ ಆವರಣದಲ್ಲಿ ಅವರ ಕುಟುಂಬದ ವತಿಯಿಂದ ಇವರ ತಂದೆಯವರ ಹೆಸರಿನಲ್ಲಿ ರಂಗಮಂದಿರ ನಿರ್ಮಿಸಿಕೊಡಲು ಮನವಿ ಮಾಡಿದಾಗ ತಕ್ಷಣವೇ ಒಪ್ಪಿದ ಅವರು ತಮ್ಮ ಸಹೋದರರ ಜೊತೆ ಮಾತನಾಡಿ ನಿಮ್ಮ ಬಯಕೆಯನ್ನು ಈಡೇರಿಸುವ ಭರವಸೆ ನೀಡುವ ಮೂಲಕ ಉಳಿದ ದಾನಿಗಳಿಗೆ ಪ್ರೇರಣೆಯಾದರು.
ಬಸಪುರದ ಸರ್ಕಾರಿ ಶಾಲೆಯಲ್ಲಿ ಓದಿದ ಬಹಳ ವಿದ್ಯಾರ್ಥಿಗಳು ಇಂದು ಉತ್ತಮ ಸ್ಥಾನದಲ್ಲಿದ್ದು ಅವರುಗಳು ಸಹ ಸಿದ್ದನಗೌಡ ರೀತಿ ಶಾಲೆಯ ಅಭಿವೃದ್ಧಿಗೆ ಸಹಾಯ ಮಾಡಿದರೆ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿ ಹಾಗೂ ಅವರ ಪ್ರೇರಣೆಯಿಂದ ಮಕ್ಕಳು ಸಹ ಉತ್ತಮ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿತ್ತು.
ಕೆ.ಎಲ್.ಹರೀಶ್ ಬಸಾಪುರ.