ಹೊನ್ನಾಳಿ : ಪಂಡಿತ್ ದೀನ್ ದಯಾಳ್ ಉಪಾಧ್ಯಾಯರು ದೇಶದ ಸ್ವಾಭಿಮಾನ, ಸಮಾನತೆ, ಸೋದರ ಭಾವನೆಗಳನ್ನು ಬೆಳೆಸುವ ಸನ್ಮಾರ್ಗಕ್ಕೆ ಬೆಳಕಾಗಿದ್ದರೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಹೊನ್ನಾಳಿಯ ಹಿರೇಕಲ್ಮಠದಲ್ಲಿರುವ ಶಾಸಕರ ನಿವಾಸದಲ್ಲಿ ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಮಗ್ರ ಮಾನವತಾವಾದಿ ಮತ್ತು ಅಂತ್ಯೋದಯ ಮೂಲಕ ಬಡವರನ್ನು ಸಮಾಜದಲ್ಲಿ ಆರ್ಥಿಕವಾಗಿ ಮೇಲೆತ್ತುವ ಕೆಲಸವನ್ನು ಉಪಾಧ್ಯಾಯರು ಮಾಡಿದ್ದಾರೆ ಎಂದರಲ್ಲದೇ, ಉಪಾಧ್ಯಾಯರು ಅಸಾಧಾರಣ ಚಿಂತಕ ಮತ್ತು ಬುದ್ದಿಜೀವಿ ಎಂದರು.
ದೀನ್ ದಯಾಳ್ ಅವರು ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲಾ, ಭ್ರಷ್ಟಾಚಾರದ ವಿರುದ್ದ ಜನಜಾಗೃತಿ ಮೂಡಿಸುವ ಕಳಕಳಿಯನ್ನು ಅವರು ಹೊಂದಿದ್ದರು ಎಂದ ಶಾಸಕರು, ಸಮಾಜದಲ್ಲಿ ಮೇಲು ಕೀಳು ಭಾವನೆ ದೂರವಾಗ ಬೇಕೆಂದು ಬಯಸಿದ್ದರು ಎಂದರು.
ಯುವಕರಲ್ಲಿ ದೇಶಪ್ರೇಮವನ್ನು ತುಂಬಿದ ದೀನ ದಯಾಳ್ ಅವರು ಗಾಂಧೀಜಿಯವರ ಕನಸಿನ ರಾಷ್ಟ್ರೀಯ ಸೇವಾ ಯೋಜನೆಯನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತಂದರು ಎಂದ ಶಾಸಕರು, ಮಾನವತಾವಾದದ ಪ್ರತಿಪಾದಕರಲ್ಲಿ ಬಹುದೊಡ್ಡ ಹೆಸರು ಪಂಡಿತ್ ದೀನದಯಾಳ್ ಉಪಾದ್ಯಾಯ ಅವರದ್ದು ಎಂದರು.
ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದ ಅಂದಿನ ರಾಷ್ಟ್ರನಾಯಕರಲ್ಲಿ ನಡೆಯುತ್ತಿದ್ದ ಸೈದ್ದಾಂತಿಕ ವಾದ-ವಿವಾದಗಳು, ಸಮಾಜವಾದ, ವಿಮರ್ಶವಾದಗಳ ನಡುವೆಯೇ ರಾಷ್ಟ್ರಸೇವಾ ಕಾರ್ಯದಲ್ಲಿ ಉಪಾಧ್ಯಾಯರು ಸಕ್ರಿಯವಾಗಿ ತೊಡಗಿಕೊಂಡಿದ್ದರು ಎಂದರು.
ಈ ಸಂದರ್ಭ ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್,ದಿಶಾಕಮಿಟಿ ಸದಸ್ಯರಾದ ನೆಲವೊನ್ನೆ ಮಂಜುನಾಥ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಂಗನಾಥ್, ಎಸ್.ಪಿ.ರವಿಕುಮಾರ್, ತಾಲೂಕು ಪ್ರದಾನ ಕಾರ್ಯದರ್ಶಿ ಶಿವಾನಂದ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ರಾಜು,ಪುರಸಭೆ ನಾಮನಿರ್ದೇಶಿಕ ಸದಸ್ಯರಾದ ಕಿಟ್ಟಿ ಸೇರಿದಂತೆ ಮತ್ತಿತತರಿದ್ದರು.