ಹುಣಸಘಟ್ಟ: ಹೊನ್ನಾಳಿ ತಾಲೂಕು ಕ್ಯಾಸಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2021 -22 ನೇ ಸಾಲಿನಲ್ಲಿ 4.93 ಲಕ್ಷ ನೀವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ ಮಂಜಪ್ಪನವರು ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯ ಉದ್ಘಾಟನೆ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಹಕಾರಿ ಸಂಘಗಳು ಲಾಭ ಗಳಿಸುವುದಕ್ಕಿಂತಲೂ ಸಂಘದ ಸದಸ್ಯರ ಅವಶ್ಯಕತೆಗಳಿಗೆ ಸ್ಪಂದಿಸಿ ಉತ್ತಮ ಸೇವೆ ನೀಡುವ ಗುರಿ ಹೊಂದಿದೆ ಎಂದರು.
ಸಂಘದ ನಿರ್ದೇಶಕ ಎಂ ಕೆ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸಹಕಾರಿ ಸಂಘಗಳು ಪ್ರಜಾಪ್ರಭುತ್ವ ತತ್ವಗಳಡಿ ಕೆಲಸ ಮಾಡುತ್ತಿದ್ದು ಗ್ರಾಮೀಣ ಆರ್ಥಿಕ ವ್ಯವಸ್ಥೆಗೆ ವರದಾನವಾಗಿ ಪರಿಣಮಿಸಿವೆ. ಕೃಷಿಕರ ಬದುಕಿಗೆ ಆಸರೆಯಾಗಿದೆ. ತಮ್ಮ ಸದಸ್ಯರು ಒಳಿತಿಗಾಗಿ ಉತ್ತಮ ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಜನರಿಗೆ ಸಹಾಯ ಮಾಡಬೇಕು. ಜನರ ವಿಶ್ವಾಸ ಗಳಿಸುವುದಕ್ಕಾಗಿ ತನ್ನೆಲ್ಲ ಚಟುವಟಿಕೆಗಳಲ್ಲಿ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ವಾರ್ಷಿಕ ಮಹಾಸಭೆಯ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಚರ್ಚೆಯ ವಿಷಯಗಳ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ರೈತ ಮುಖಂಡರು ಹಾಗೂ ಸದಸ್ಯರು ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಇನ್ನು ಕಡಿಮೆ ಸಾಲದಲ್ಲಿಯೇ ಇರುವ ರೈತರಿಗೆ ಹೆಚ್ಚಿನ ಸಾಲ ಒದಗಿಸಬೇಕು, ಸಂಘಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಬೇಕು. ಮುಂದಿನ ದಿನಗಳಲ್ಲಿ ಸಂಘದಿಂದ ರೈತರಿಗೆ ಬಿತ್ತನೆ ಬೀಜ ಔಷಧಿ ರಸಗೊಬ್ಬರ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು ಎಂದರು.
ಮಹಾಸಭೆಯಲ್ಲಿ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್ಎ ಗದ್ದಿಗೇಶ್ ಸೇರಿದಂತೆ ಮಾಜಿ ಅಧ್ಯಕ್ಷರು ರೈತ ಮುಖಂಡರು, ಸಮಾಜದ ಗಣ್ಯರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಪಾರ್ವತಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್, ನಿರ್ದೇಶಕರಾದ ದೊಡ್ಡೇಶ, ಕರಿಬಸಪ್ಪ, ಮಂಜಪ್ಪ, ಚಂದ್ರಪ್ಪ, ನಾಗರಾಜಪ್ಪ, ರಾಜಪ್ಪ ಗಂಗಮ್ಮ, ಮಂಜುನಾಥ್ ಪಾಟೀಲ್, ನಾಗರಾಜ, ಬಸಪ್ಪ, ಬಗರುಕುಂ ಸಮಿತಿ ನಿರ್ದೇಶಕ ಮಹಾಂತೇಶ್, ಕುಳಗಟ್ಟೆ ಗ್ರಾ ಪಂ ಅಧ್ಯಕ್ಷ ಚಂದ್ರಪ್ಪ ಹಾಗೂ 11 ಹಳ್ಳಿ ರೈತರು ಉಪಸ್ಥಿತರಿದ್ದರು.