ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಹುಣಸಘಟ್ಟ ಗ್ರಾಮದ ಮಾರಿಕಾಂಬಾ ದೇವಾಲಯದಲ್ಲಿ ಸಪ್ಟಂಬರ್ 26ರಿಂದ ಎಂಟನೇ ವರ್ಷದ ದೇವಿ ಪುರಾಣ ಪ್ರತಿ ರಾತ್ರಿಯೂ ಪಾರಾಯಣ ಮಾಡುತ್ತಿದ್ದು ಶುಕ್ರವಾರ ದೇವಸ್ಥಾನದ ಸಮಿತಿ ಹಾಗೂ ಗ್ರಾಮಸ್ಥರ ನೆರವಿನೊಂದಿಗೆ ಚಂಡಿಕಾಹೋಮ ನಡೆಯಿತು.
ರಾಮಪ್ರಸಾದ್ ಭಟ್ರು ಚಂಡಿಕಾಹೋಮ ನೆರವೇರಿಸಿ ಭಕ್ತರಿಗೆ ಪಂಚ ಪಲ್ಲಾರ ಪ್ರಸಾದ ನೀಡಿ ಪತ್ರಿಕೆಯೊಂದಿಗೆ ಮಾತನಾಡಿ ನವರಾತ್ರಿ ಸಂದರ್ಭದಲ್ಲಿ ದೇವಿ ಪುರಾಣಕ್ಕೆ ವಿಶೇಷ ಫಲ ಗಳಿವೆ. ಶಕ್ತಿಯನ್ನು ಶಿವನಂತೆಯೇ ಪೂಜಿಸುವ ನಾಡಿನ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ನವರಾತ್ರಿ ಆಚರಣೆಯನ್ನು ಕಾಣಬಹುದು. ಸ್ವತಹ ಪಾರಾಯಣ ಮಾಡುವುದರಿಂದ, ಕೇಳುವುದರಿಂದ ದೇವಿಯ ಕೃಪೆಗೆ ಪಾತ್ರರಾಗಬಹುದು ಎಂದ ಅವರು ಚಂಡಿಕಾ ದೇವಿಯು ಮಧು-ಕೈಟಭ, ಮಹಿಷಾಸುರ, ಶಂಭ – ನಿಶಂಭ, ಚಂಡ – ಮುಂಡ, ರಕ್ತಬೀಜಾಸುರ ರಾಕ್ಷಸರನ್ನು ತ್ರಿ ಶಕ್ತಿಯ ರೂಪದಿಂದ ವದಿಸುತ್ತಾಳೆ. ಲೋಕಪಾವನಿ ಯಾಗಿ ಲೋಕ ಕಲ್ಯಾಣವನ್ನು ಮಾಡುತ್ತಾಳೆ. ಯಾರು ಗ್ರಾಮದಲ್ಲಿ ನವರಾತ್ರಿಯ ಸಂದರ್ಭದಲ್ಲಿ ಶಕ್ತಿದೇವತೆಯ ಪಾರಾಯಣ ಮಾಡಿ ಚಂಡಿಕಾ ಹೋಮವನ್ನು ಮಾಡುತ್ತಾರೋ ಅಂತಹ ಗ್ರಾಮಗಳಲ್ಲಿ ಸಂಕಷ್ಟಗಳು ನಿವಾರಣೆಯಾಗಿ, ಗ್ರಾಮದಲ್ಲಿ ಸುಖ ಶಾಂತಿ ಸಮೃದ್ಧಿ ಉತ್ತಮ ಮಳೆ ಬೆಳೆ ಯಾಗುತ್ತದೆ ಎಂದರು.
ಚಂಡಿಕಾ ಹೋಮಕ್ಕೂ ಮುನ್ನ ಶ್ರೀ ಮಾರಿಕಾಂಬ ದೇವಿಗೆ ವಿವಿಧ ಪುಷ್ಪಗಳ ಅಲಂಕಾರ, ಮಹಾಮಂಗಳಾರತಿ ನಡೆಯಿತು ಸುತ್ತಮುತ್ತಲ ಗ್ರಾಮದ ಭಕ್ತರು ಚಂಡಿಕಾ ಹೋಮದಲ್ಲಿ ಪಾಲ್ಗೊಂಡು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಭಕ್ತಿಯನ್ನು ಸಮರ್ಪಿಸಿ ಪ್ರಸಾದವನ್ನು ಸವಿದರು.