ಹುಣಸಘಟ್ಟ: ಬೇರೆ ದಿನಗಳಿಗಿಂತ ಈ ಶರನ್ನವರಾತ್ರಿ ದಿನಗಳಲ್ಲಿ ದೇವಿಯ ಸಾನಿಧ್ಯ ಅನೇಕಪಟ್ಟು ಹೆಚ್ಚಿರುತ್ತದೆ. ದುಷ್ಟರ ಶಿಕ್ಷಣೆ, ಶಿಷ್ಟ ರಕ್ಷಣೆ ಮಾಡುವ ದೇವಿಯ ಅನುಗ್ರಹ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಶ್ರೀ ದುರ್ಗಾದೇವಿಯನ್ನು ಪೂಜಿಸಿ ಆಕೆಯನ್ನು ಶರಣು ಹೋಗಲು ಅತ್ಯಂತ ಪ್ರಶಸ್ತ ಕಾಲ ಎಂದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕುಳಗಟ್ಟೆ ಗ್ರಾಮದ ಮಠದ ಮನೆ ಕೆಎಂ ಪರಮೇಶ್ವರಯ್ಯ ಅವರ ಮನೆಯಲ್ಲಿ ಹಮ್ಮಿಕೊಂಡ ಶರನವ ರಾತ್ರಿಯ ಶ್ರೀ ದುರ್ಗಾದೇವಿ ಆರಾಧನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು ದುಷ್ಟಶಕ್ತಿ ನಿಗ್ರಹಾಗೊಂಡ ಶಿಷ್ಟರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಲಾಗುವ ಈ ನವರಾತ್ರಿ ಅನೇಕ ವೈಶಿಷ್ಟತೆ ಪಡೆದು, ಮನುಷ್ಯ ತನ್ನಲ್ಲಿರುವ ದುಷ್ಟಬುದ್ಧಿ ಕೆಟ್ಟ ಗುಣಗಳನ್ನು ನಿವಾರಿಸಿಕೊಳ್ಳಲು ದೇವಿಯ ಆರಾಧನೆ ಮುಖ್ಯವಾಗಿರುತ್ತದೆ. ದೇವಿ ಆರಾಧನೆಯಿಂದ ಆತ್ಮಶುದ್ಧಿ ಆತ್ಮಸ್ಥೈರ್ಯ ಶಕ್ತಿಯನ್ನು ಪಡೆದುಕೊಂಡು ನೆಮ್ಮದಿಯ ಜೀವನ ರೂಪಿಸಿಕೊಳ್ಳಲು ಮುಂದಾಗಬೇಕು ಎಂದರು.