ಹೊನ್ನಾಳಿ:
2013ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ರೂ.ಗಳನ್ನು ನನ್ನಿಂದ ಅಪೇಕ್ಷಿಸಿದ್ದರು ಎಂಬುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಈಚೆಗೆ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದು, ಅದು ಸತ್ಯಕ್ಕೆ ದೂರವಾದುದು ಎಂದು ಕುಂಚಿಟಿಗ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಎಂ.ಎಲ್. ಸುರೇಶ್ ಹೇಳಿದರು.
ತಾಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಈಚೆಗೆ ಹೊನ್ನಾಳಿ ತಾಲೂಕು ಕಚೇರಿ ಆವರಣದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ವೇಳೆ ನಾನು ರೇಣುಕಾಚಾರ್ಯ ವಿರುದ್ಧ ಮಾಡಿದ ಭಾಷಣದಿಂದ ಕೆರಳಿ ಈ ರೀತಿಯ ಸುಳ್ಳು ಆರೋಪ ಮಾಡಿದ್ದಾರೆ ಎಂದು ತಿಳಿಸಿದರು.
ರೇಣುಕಾಚಾರ್ಯ ಈ ರೀತಿ ಆಧಾರರಹಿತ ಆರೋಪ ಮಾಡಬಾರದು. ನಾನು ಅವರಿಂದ ಯಾವ ಸಂದರ್ಭದಲ್ಲಿಯೂ, ಎಷ್ಟೇ ಹಣವನ್ನು ಅಪೇಕ್ಷಿಸಿರಲಿಲ್ಲ ಎಂಬುದಾಗಿ ಹೊನ್ನಾಳಿಯ ಹಿರೇಕಲ್ಮಠದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ. ಆಗ ಸತ್ಯಾಸತ್ಯತೆ ಜನತೆಗೆ ತಿಳಿಯುತ್ತದೆ ಎಂದು ವಿವರಿಸಿದರು.
ಶಾಸಕರ ಆರೋಪವನ್ನು ಖಂಡಿಸುವುದಾಗಿ ತಿಳಿಸಿದ ಎಂ.ಎಲ್. ಸುರೇಶ್, ನಮ್ಮ ತಂದೆ ಲಕ್ಷ್ಮಣರಾವ್ ಅವರು ಮೊದಲಿನಿಂದಲೂ ಶ್ರೀಮಂತರು. ನಮಗೆ ಸಾಕಷ್ಟು ಆಸ್ತಿ ಮಾಡಿದ್ದಾರೆ. ಯಾರೊಬ್ಬರಿಂದಲೂ ನಾನು 10 ರೂ.ಗಳನ್ನೂ ಪಡೆದಿಲ್ಲ. ಇನ್ನು ರೇಣುಕಾಚಾರ್ಯ ಅವರ ಬಳಿ ನಾನು 15 ಲಕ್ಷ ರೂ.ಗಳನ್ನು ಕೇಳುತ್ತೇನೆಯೇ? 2004ರಲ್ಲಿ ಶಾಸಕರಾದ ಬಳಿಕ ರೇಣುಕಾಚಾರ್ಯ ಹಣ ನೋಡಿದ್ದಾರೆ. ಶಾಸಕರಾಗುವುದಕ್ಕಿಂತ ಮೊದಲು ರೇಣುಕಾಚಾರ್ಯ ಹೇಗಿದ್ದರು? ಅವರ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಾನು ಬಲ್ಲೆ. ಹಾಗಾಗಿ, ಚುನಾವಣೆ ಸಮೀಪಿಸುತ್ತಿರುವ ವೇಳೆ ಈ ರೀತಿ ಹೇಳಿಕೆಗಳನ್ನು ನೀಡುತ್ತ ಒಂದು ಜನಾಂಗವನ್ನು ಓಲೈಸಿಕೊಳ್ಳಲು ಮುಂದಾಗುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಈ ಹಿಂದೆ ಒಂದೆರಡು ಬಾರಿ ನಮಗೆ ಬೆಂಗಳೂರಿನಲ್ಲಿ ರೇಣುಕಾಚಾರ್ಯ ಸಹಾಯ ಮಾಡಿದ್ದಾರೆ. ಆದರೆ, ಆ ವೇಳೆಯೇ ನಾನು ನಿಮಗೆ ಚುನಾವಣೆಯಲ್ಲಿ ಸಹಾಯ ಮಾಡುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿರುವುದರಿಂದ ಮತ್ತು ಡಿ.ಜಿ. ಶಾಂತನಗೌಡ ಅವರ ಬೆಂಬಲಿಗನಾಗಿರುವುದರಿಂದ ನಿಮ್ಮ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ತಿಳಿಸಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ ಎಂದು ತಿಳಿಸಿದರು.
ಕೊರೊನಾ ಸಂದರ್ಭದಲ್ಲಿ ನಾನು ಹಾಗೆ ಮಾಡಿದ್ದೆ, ಹೀಗೆ ಮಾಡಿದ್ದೆ ಎಂದು ರೇಣುಕಾಚಾರ್ಯ ಜಂಭ ಕೊಚ್ಚಿಕೊಳ್ಳುತ್ತಿದ್ದಾರೆ. ಒಬ್ಬ ಶಾಸಕರಾಗಿ ಏನು ಕೆಲಸ ಮಾಡಬೇಕೋ ಅದನ್ನು ಅವರು ಮಾಡಿದ್ದಾರೆ. ಆದರೆ, ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಕುರಿತು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಡಿ.ಜಿ. ಶಾಂತನಗೌಡ ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವೇಳೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಂಡ ನಂತರ ಹೊನ್ನಾಳಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಬಳಿಕ ಕ್ಷೇತ್ರದ ಜನರೊಂದಿಗೆ ಬೆರೆತು ಕಾರ್ಯನಿರ್ವಹಿಸಿದ್ದಾರೆ. ಒಂದು ವಾಹನವನ್ನು ನೀಡಿ, ರೋಗಿಗಳನ್ನು ಸಾಗಾಟ ಮಾಡಲು ಸಹಕರಿಸಿ ಜನರೊಂದಿಗೆ ಇದ್ದರು. ಆ ಬಗ್ಗೆ ರೇಣುಕಾಚಾರ್ಯ ವ್ಯಂಗ್ಯವಾಗಿ ಮಾತನಾಡುತ್ತಾರೆ. ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಮಲಗಿದ್ದವರು ಇದೀಗ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಓಡಾಡುತ್ತಿದ್ದಾರೆ ಎಂದು ಅವಹೇಳನ ಮಾಡುತ್ತಿದ್ದಾರೆ. ಇದಕ್ಕೆ ಜನರು ಸಕಾಲದಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಈಚೆಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಹೊನ್ನಾಳಿ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ತಹಸೀಲ್ದಾರ್ ವಿರುದ್ಧ ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ. ಆದರೆ, ಕುಂಚಿಟಿಗ ಸಮಾಜದ ಓರ್ವ ಹೆಣ್ಣುಮಗಳ ಬಗ್ಗೆ ಮಾಜಿ ಶಾಸಕರು ಅವಹೇಳನ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಹಳ್ಳಿ-ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತ ನಮ್ಮ ಸಮಾಜವನ್ನು ತಮ್ಮ ಅನುಕೂಲಕ್ಕೆ, ರಾಜಕೀಯ ಲಾಭಕ್ಕಾಗಿ, ಅನುಕಂಪದ ಮತಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. 2023ರ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹೀಗೆ ಅನಗತ್ಯ ವಿಷಯಗಳನ್ನು ಕೆದಕುತ್ತ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕುಂಚಿಟಿಗ ಸಮಾಜದ ಒಗ್ಗಟ್ಟನ್ನು ಮುರಿಯಲು ರೇಣುಕಾಚಾರ್ಯ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕೀಲರಾದ ವೈ.ಜೆ. ರಾಮಚಂದ್ರಪ್ಪ ಮಾತನಾಡಿ, ಶಾಸಕ ರೇಣುಕಾಚಾರ್ಯ ಎಂದಿಗೂ ಇತರರನ್ನು ಬೆಳೆಸುವ ಗುಣ ಹೊಂದಿಲ್ಲ. ಅಂಥವರನ್ನು ಶಾಸಕರನ್ನಾಗಿ ಪಡೆದಿರುವುದು ನಮ್ಮ ದೌರ್ಭಾಗ್ಯ ಎಂದು ಅಭಿಪ್ರಾಯಪಟ್ಟರು.
ವಕೀಲರ ಸಂಘದ ಗ್ರಂಥಾಲಯಕ್ಕೆ ರೇಣುಕಾಚಾರ್ಯ ಈವರೆಗೆ ಒಂದು ಪುಸ್ತಕವನ್ನೂ ಒದಗಿಸಿಲ್ಲ. ಬೇರೆ ಕ್ಷೇತ್ರಗಳ ಶಾಸಕರು ವಕೀಲರ ಗ್ರಂಥಾಲಯಕ್ಕೆ ನೀಡಿರುವ ಸೌಲಭ್ಯಗಳನ್ನು ನೋಡಿದರೆ ಸಂತೋಷವಾಗುತ್ತದೆ. ಬೇಕಾಬಿಟ್ಟಿಯಾಗಿ ಹಣ, ಹೆಂಡ ಹಂಚುವ ಮೂಲಕ ಹೊನ್ನಾಳಿ ಕ್ಷೇತ್ರದ ಯುವಜನರನ್ನು ದಾರಿತಪ್ಪಿಸುತ್ತಿದ್ದಾರೆ. ಮಹಿಳೆಯರನ್ನು, ಸ್ತ್ರೀ ಶಕ್ತಿ ಸಂಘದ ಸದಸ್ಯೆಯರನ್ನು ಕರೆಸಿ, ಗಂಗಾಪೂಜೆ ಮಾಡಿಸಿ, ಕುಂಭಗಳನ್ನು ಹೊರಿಸಿ, ಸೀರೆಗಳನ್ನು ಹಂಚುವ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾರೆ. ಹೀಗೆ, ಮಹಿಳೆಯರನ್ನು ದಾರಿತಪ್ಪಿಸುವ ಕಾರಣದಿಂದಾಗಿ ಹೊನ್ನಾಳಿ ಕ್ಷೇತ್ರದಲ್ಲಿ ಗಂಡನಿಂದ ಜೀವನಾಂಶ ಕೋರಿ 678 ಪ್ರಕರಣಗಳು ಈ ವರ್ಷವೊಂದರಲ್ಲೇ ದಾಖಲಾಗಿವೆ. ಸೀಮಂತ ಕಾರ್ಯ ಮಾಡುವ ನೆಪದಲ್ಲಿ ಮಹಿಳೆಯರಿಗೆ ಅವಮಾನ ಮಾಡುತ್ತಿದ್ದಾರೆ. ಗ್ರಾಮಗಳಲ್ಲಿ ಮೃತರಾಗುವವರ ಮನೆಗಳಿಗೆ ತೆರಳಿ ಅಂತ್ಯಕ್ರಿಯೆಗೆ ಧನಸಹಾಯ ಮಾಡುವ ಮೂಲಕವೂ ಜನರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಮಾಜಿ ಸದಸ್ಯ ಪೀರ್ಯಾನಾಯ್ಕ ಮಾತನಾಡಿ, ಪೊಲೀಸ್ ಇಲಾಖೆ ಮೇಲೆ ರೇಣುಕಾಚಾರ್ಯ ಅನಗತ್ಯ ಒತ್ತಡ ಹಾಕುತ್ತ ಆರೋಪಿಗಳನ್ನು ಮನೆಗೆ ಕಳುಹಿಸಲು ಹೇಳುತ್ತಿದ್ದಾರೆ. ನ್ಯಾಮತಿ ತಾಲೂಕಿನ ಸವಳಂಗ ಹೊರ ಠಾಣೆಯ ಪೊಲೀಸರು ಈಚೆಗೆ ಕೆಲವರನ್ನು ಠಾಣೆಗೆ ಕರೆತಂದು ವಿಚಾರಿಸುತ್ತಿದ್ದ ವೇಳೆ ಅವರನ್ನು ಬಿಟ್ಟು ಮನೆಗೆ ಕಳುಹಿಸುವಂತೆ ರೇಣುಕಾಚಾರ್ಯ ಒತ್ತಡ ಹೇರಿದ್ದಾರೆ. ಸರಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸುವುದು ಸರಿಯೇ ಎಂದು ಪ್ರಶ್ನಿಸಿದರು.
ಜಿಪಂ ಮಾಜಿ ಸದಸ್ಯ ಎಂ. ರಮೇಶ್, ಅರಕೆರೆ ಗ್ರಾಪಂ ಅಧ್ಯಕ್ಷ ನರಸಗೊಂಡನಹಳ್ಳಿ ಎನ್.ಆರ್. ಮಂಜುನಾಥ್, ಮುಖಂಡರಾದ ಮಾಸಡಿ ಎಂ.ಎಚ್. ಗಜೇಂದ್ರಪ್ಪ, ಗದ್ದಿಗೇಶ್, ಕೊನಾಯಕನಹಳ್ಳಿ ಬಸವಲಿಂಗಪ್ಪ, ರುದ್ರೇಶ್, ಸುರೇಶ್, ಎಂ.ಎಲ್. ರಮೇಶ್, ದಿಡಗೂರು ಜಿ.ಎಚ್. ತಮ್ಮಣ್ಣ, ದರ್ಶನ್ ಬಳ್ಳೇಶ್ವರ, ಧರ್ಮಪ್ಪ, ಚಟ್ನಹಳ್ಳಿ ರುದ್ರಪ್ಪ, ಅರಬಗಟ್ಟೆ ಮೌನೇಶ್, ಎಸ್. ನಾಗರಾಜ್, ಅರಕೆರೆ ಎ.ಎಲ್. ಅಮಿತ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

Leave a Reply

Your email address will not be published. Required fields are marked *