ಹೊನ್ನಾಳಿ:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಕೋಡಿಹಳ್ಳಿ ಚಂದ್ರೇಶಖರ್ ಬಣ)ದ ವತಿಯಿಂದ ಶೀಘ್ರದಲ್ಲೇ ಹೋರಾಟ ನಡೆಸಲಾಗುವುದು ಎಂದು ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಹೇಳಿದರು.
ಮಂಗಳವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಕ್ಟೋಬರ್ 10ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹೋರಾಟದ ದಿನಾಂಕ ನಿಗದಿಗೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ರೈತ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ತಿಳಿಸಿದರು.
ಬಗರ್‍ಹುಕುಂ ಸಾಗುವಳಿದಾರರಿಗೆ ಸರಕಾರ ಸಮರ್ಪಕವಾಗಿ ಹಕ್ಕುಪತ್ರಗಳನ್ನು ನೀಡಿಲ್ಲ. ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ಬೆಳೆ ಹಾನಿ ಅನುಭವಿಸಿದ ರೈತರಿಗೆ ಸಮರ್ಪಕವಾಗಿ ಪರಿಹಾರ ವಿತರಿಸಿಲ್ಲ. ಒಂದೆಡೆ ವಿಪರೀತ ಮಳೆ, ಮತ್ತೊಂದೆಡೆ ಮೂರು ಪಟ್ಟು ಬರಗಾಲ ಆವರಿಸಿದ್ದು, ರೈತರ ನೆರವಿಗೆ ಸರಕಾರ ಧಾವಿಸಿಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನೂತನ ಕೃಷಿ ಕಾಯ್ದೆಗಳಿಗೆ ಅನುಮೋದನೆ ನೀಡಿದ್ದರು. ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ಕೇಂದ್ರ ಸರಕಾರ ಹಿಂಪಡೆದಿದೆಯಾದರೂ ರಾಜ್ಯ ಸರಕಾರ ಇನ್ನೂ ವಾಪಸ್ ಪಡೆದಿಲ್ಲ. ರೈತ ಪರ ಕಾಳಜಿ ತೋರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರಕಾರದ ವಿರುದ್ಧ ಐತಿಹಾಸಿಕ ಚಳವಳಿ ರೂಪಿಸುವ ಹಿನ್ನೆಲೆಯಲ್ಲಿ ಅ.10ರಂದು ಪೂರ್ವಭಾವಿ ಸಭೆ ನಡೆಸಲಾಗುವುದು ಎಂದು ವಿವರಿಸಿದರು.
ಅನಿಶ್ಚಿತ ಮಳೆ, ನೀರಾವರಿ ಅವ್ಯವಸ್ಥೆ, ಬೆಳೆಗಳಿಗೆ ಸೂಕ್ತ ಬೆಲೆ ದೊರೆಯದೇ ಅನುಭವಿಸುವ ನಷ್ಟ ಇತ್ಯಾದಿಗಳಿಂದ ರೈತ ಕಂಗೆಟ್ಟಿರುವ ಹೊತ್ತಿನಲ್ಲಿ ಸರಕಾರ ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಅಳವಡಿಸಲು ಹೊರಟಿದೆ. ಮೀಟರ್ ಅಳವಡಿಸಲು ಆಗಮಿಸುವ ಕೆಇಬಿ ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿಹಾಕುವ ಬಗ್ಗೆ ಅ.10ರಂದು ನಡೆಯುವ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಗುವುದು. ಆದ್ದರಿಂದ, ಈ ಸಭೆಗೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ವಿನಂತಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ(ಕೋಡಿಹಳ್ಳಿ ಚಂದ್ರೇಶಖರ್ ಬಣ)ದ ದಾವಣಗೆರೆ ತಾಲೂಕು ಘಟಕದ ಕಾರ್ಯಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಮಂಜುನಾಥ್, ಚನ್ನಗಿರಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಕರೇಕಟ್ಟೆ ಖಲೀಮುಲ್ಲಾ, ಹಸಿರು ಸೇನೆ ಮುಖಂಡ ಭರ್ಮಪ್ಪ ಮಾಸಡಿ, ಪ್ರಗತಿಪರ ರೈತ ಸೊರಟೂರು ಜಿ.ಆರ್. ನಿರಂಜನ್‍ಕುಮಾರ್, ರೈತ ಮುಖಂಡರಾದ ಮಲ್ಲಶೆಟ್ಟಿಹಳ್ಳಿ ಸತೀಶ್, ನಾಗರಾಜ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.