ಹೊನ್ನಾಳಿ:
ತಾಲೂಕಿನ ವಿವಿಧೆಡೆ ರೈತರು ಬುಧವಾರ ಸಡಗರ-ಸಂಭ್ರಮಗಳಿಂದ ಶೀಗಿ ಹುಣ್ಣಿಮೆ ಆಚರಿಸಿದರು. ತಮಗೆ ಅನ್ನ ನೀಡುವ ಭೂಮಿ ತಾಯಿಗೆ ಕೃತಜ್ಞತೆ, ಗೌರವ ಸಲ್ಲಿಸುವ ದೃಷ್ಟಿಯಿಂದ ಭೂ ತಾಯಿಯ ಮಕ್ಕಳು ಶೀಗಿ ಹುಣ್ಣಿಮೆ ಆಚರಿಸಿದರು.
ಬೆಳೆಗಳು ಕಟಾವಿಗೆ ಬಂದಿರುವ ಈ ಸಮಯದಲ್ಲಿ ರೈತರು ಸಂಭ್ರಮಗೊಂಡಿದ್ದು, ತಮ್ಮ ಹೊಲಗಳಲ್ಲಿ ಭೂ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಶೀಗಿ ಹುಣ್ಣಿಮೆಯನ್ನು ಆಚರಿಸಿದರು. ಭೂ ದೇವಿಯನ್ನು ಆರಾಧಿಸುವ ಕಾರಣ ಈ ಹುಣ್ಣಿಮೆಗೆ “ಭೂಮಿ ಹುಣ್ಣಿಮೆ” ಎಂದೂ ಕರೆಯಲಾಗುತ್ತದೆ.
ಮಹಿಳೆಯರು ತಮ್ಮ ಮನೆಗಳಿಂದ ವಿವಿಧ ಬಗೆಯ ಅಡುಗೆ ಮಾಡಿಕೊಂಡು ಹೊಲಕ್ಕೆ ತೆಗೆದುಕೊಂಡು ಬಂದಿದ್ದರು. ಹೊಲದಲ್ಲಿ ಭೂ ದೇವಿಯ ಮೂರ್ತಿಗೆ ಹೊಸ ಸೀರೆ ಉಡಿಸಿ, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಬಗೆ ಬಗೆಯ ಆಭರಣಗಳನ್ನೂ ದೇವಿಗೆ ಸಮರ್ಪಿಸಲಾಗಿತ್ತು. ಈ ದೃಶ್ಯ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡುವಂತಿತ್ತು. ಪೂಜೆಯ ಬಳಿಕ ರೈತರು ತಮ್ಮ ಬಂಧು-ಬಳಗದವರು, ಸ್ನೇಹಿತರೊಡಗೂಡಿ ಸಾಮೂಹಿಕ ಭೋಜನ ಸವಿದರು. ಮಹಿಳೆಯರು, ಮಕ್ಕಳು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸಿದರು.
ತಾಲೂಕಿನ ದಿಡಗೂರು ಗ್ರಾಮದ ರೈತ ದಿಡಗೂರು ಎ.ಜಿ. ಪ್ರಕಾಶ್ ತಮ್ಮ ಅಡಕೆ ತೋಟದಲ್ಲಿ ಭಾನುವಾರ ಶೀಗಿ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ಕುಟುಂಬಸ್ಥರು, ಸ್ನೇಹಿತರೊಂದಿಗೆ ತೋಟದಲ್ಲಿ ಸಾಮೂಹಿಕ ಭೋಜನ ಸವಿದರು.
ತಾಲೂಕಿನ ಬಿದರಗಡ್ಡೆ, ಹೊಳೆಹರಳಹಳ್ಳಿ, ಎಚ್. ಕಡದಕಟ್ಟೆ, ಚಿಕ್ಕಬಾಸೂರು, ಅರಬಗಟ್ಟೆ, ಸೊರಟೂರು, ಕುಂದೂರು, ಕೂಲಂಬಿ, ಯಕ್ಕನಹಳ್ಳಿ, ಯರೇಹಳ್ಳಿ, ಯರೇಚಿಕ್ಕನಹಳ್ಳಿ, ಬನ್ನಿಕೋಡು, ತಿಮ್ಮೇನಹಳ್ಳಿ, ಮುಕ್ತೇನಹಳ್ಳಿ, ಕೆಂಗಲಹಳ್ಳಿ, ತರಗನಹಳ್ಳಿ, ಸಿಂಗಟಗೆರೆ, ಹನುಮನಹಳ್ಳಿ, ನೆಲಹೊನ್ನೆ, ಕುಂಬಳೂರು ಸೇರಿದಂತೆ ವಿವಿಧೆಡೆ ಭೂ ತಾಯಿಗೆ ಕೃತಜ್ಞತೆ ಸಲ್ಲಿಸುವ ಭೂಮಿ ಹುಣ್ಣಿಮೆಯನ್ನು ರೈತರು ಸಂಭ್ರಮದಿಂದ ಆಚರಿಸಿದರು.

Leave a Reply

Your email address will not be published. Required fields are marked *