2022ನೇ ಸಾಲಿನಲ್ಲಿ ತಾತ್ಕಾಲಿಕ ಪಟಾಕಿ ಮಾರಾಟ ಪರವಾನಿಗೆ ಕೋರಿ ಸಲ್ಲಿಸಿರುವ ಅರ್ಜಿದಾರರಿಗೆ ವಾಣಿಜ್ಯ ತೆರಿಗೆ ಇಲಾಖೆಯವರ ಪತ್ರ ಸೆ.28ರಲ್ಲಿ ತಿಳಿಸಿದಂತೆ ಜಿಎಸ್‍ಟಿ ಕಾಯ್ದೆಯಡಿ ಪಟಾಕಿ ಸರಕು ತೆರಿಗೆದಾಯಕ ಸರಕಾಗಿದ್ದು, ವರ್ತಕರು ತಮ್ಮ ಮುಖ್ಯ ವ್ಯಾಪಾರ ಸ್ಥಳವನ್ನು ಹೊರತುಪಡಿಸಿ ಬೇರೆ ಕಡೆ ವ್ಯಾಪಾರ ನಡೆಸಲು ಸಂಬಂಧಿಸಿದ ವ್ಯಾಪ್ತಿಯ ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಕಚೇರಿ ಮತ್ತು ಎಲ್‍ಜಿಎಸ್‍ಟಿಓ ಕಚೇರಿಗಳಲ್ಲಿ ಹೆಚ್ಚುವರಿಯಾಗಿ ತಾತ್ಕಾಲಿಕ ನೋಂದಣಿ ಪಡೆಯುವುದು ಹಾಗೂ ಅನೋಂದಾಯಿತ ವರ್ತಕರು ತಾತ್ಕಾಲಿಕ ನೊಂದಣಿ ಪಡೆಯುವುದು ಜಿಎಸ್‍ಟಿ ಕಡ್ಡಾಯವಾಗಿರುತ್ತದೆ.
ಈ ವರ್ಷ ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ದೀಪಾವಳಿ ಹಬ್ಬ ಇರುವುದರಿಂದ ವ್ಯಾಪಾರ ವಹಿವಾಟು ಪ್ರಾರಂಭವಾದಲ್ಲಿ ಈ ವರ್ತಕರಿಗೆ ನೋಂದಣಿ ನೀಡುವ ಪ್ರಕ್ರಿಯೆ ಜಾರಿಗೊಳಿಸಲು ಕಷ್ಟಸಾಧ್ಯವಾಗುತ್ತದೆ.ಈ ಪ್ರಯುಕ್ತ ವರ್ತಕರು ಪಟಾಕಿ ವ್ಯಾಪಾರ ಮಾಡಲು ಪರವಾನಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜಿಎಸ್‍ಟಿ ಕಡ್ಡಾಯವಾಗಿ ನೋಂದಣಿ ಪ್ರಮಾಣ ಪತ್ರ ಸಲ್ಲಿಸಬೇಕೆಂಬ ಷರತ್ತು ವಿಧಿಸಲು ಕೋರಿರುತ್ತಾರೆ.
ಈ ಹಿನ್ನಲೆಯಲ್ಲಿ 2022ನೇ ಸಾಲಿನಲ್ಲಿ ತಾತ್ಕಾಲಿಕ ಪಟಾಕಿ ಪರವಾನಿಗೆ ಕೋರಿ ಸಲ್ಲಿಸಿರುವ ಅರ್ಜಿದಾರರು ಈ ಕಚೇರಿಯಿಂದ ಪರವಾನಿಗೆ ಪಡೆಯುವ ಸಂದರ್ಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಿಂದ ಜಿಎಸ್‍ಟಿ ಕಡ್ಡಾಯವಾಗಿ ಖಾಯಂ/ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರವನ್ನು ಪಡೆದು ಸಲ್ಲಿಸಿದಲ್ಲಿ ಮಾತ್ರ ಪರವಾನಿಗೆದಾರರಿಗೆ ಅನುಕೂಲವಾಗುವಂತೆ ಪರವಾನಿಗೆ ಪತ್ರದಲ್ಲಿ ಜಿಎಸ್‍ಟಿ ನೋಂದಣಿಯನ್ನು ನಮೂದು ಮಾಡಿ ವಿತರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದ್ದಾರೆ.