ಅಪಘಾತಗಳು ಸಂಭವಿಸಿದಾಗ ತುರ್ತು ಚಿಕಿತ್ಸೆಯ ಮೂಲಕ ಜೀವ ಉಳಿಸಲು ಪ್ರತಿಯೊಬ್ಬರಿಗೂ ಪ್ರಥಮ ಚಿಕಿತ್ಸೆಯ ಮಾಹಿತಿ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ಹೇಳಿದರು.
ಶುಕ್ರವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತುರ್ತು ಸಂದರ್ಭಗಳಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ಆಸ್ಪತ್ರೆಗೆ ದಾಖಲಿಸುವ ಮೊದಲು ಅವಶ್ಯಕವಾದ ಪ್ರಥಮ ಚಿಕಿತ್ಸೆ ನೀಡುವ ಮೂಲಕ ಪ್ರಾಣ ಹಾನಿ ಉಂಟಾಗುವುದನ್ನು ತಡೆಯಬಹುದಾಗಿದೆ. ಅನೇಕ ಸಮೀಕ್ಷೆಗಳ ಪ್ರಕಾರ ಜನರಿಗೆ ಪ್ರಥಮ ಚಿಕಿತ್ಸೆಯ ಅರಿವು ನೀಡಿದರೆ ಅನೇಕ ಅನಾಹುತಗಳನ್ನು ಮತ್ತು ಸಾವುಗಳನ್ನು ತಡೆಯಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ಹೆಚ್ಚು ಹೆಚ್ಚು ಜನರಿಗೆ ಪ್ರಥಮ ಚಿಕಿತ್ಸೆ ಕುರಿತು ಮಾಹಿತಿ ನೀಡಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ರವೀಂದ್ರ ಎಸ್.ಬಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ದೇಶವು ಆರೋಗ್ಯ ಕ್ಷೇತ್ರದಲ್ಲಿ ಅನೇಕ ಹೊಸ ಹೊಸ ಬದಲಾವಣೆಗಳನ್ನು ಕಂಡಿದೆ. ಆದರೆ ಅನಾಹುತಗಳು ಮತ್ತು ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಪ್ರಥಮವಾಗಿ ಚಿಕಿತ್ಸೆ ನೀಡುವ ಕುರಿತು ಅನೇಕ ಜನರಿಗೆ ಮಾಹಿತಿಯ ಕೊರತೆ ಇದೆ. ಹಾಗಾಗಿ ಅಪಘಾತಗಳು ನಡೆದಾಗ ಹೇಗೆ ಪರಿಹರಿಸಬೇಕು ಎನ್ನುವ ಕುರಿತು ಮೂರು ದಿನಗಳ ಕಾಲ ನಡೆಯುವ ಪ್ರಥಮ ಚಿಕಿತ್ಸಾ ತರಬೇತಿಯಲ್ಲಿ ಮಾಹಿತಿ ತಿಳಿಸಲಾಗುವುದು ಎಂದರು.
ಚಿಗಟೇರಿ ಜಿಲ್ಲಾ ಡಾ.ಷಣ್ಮುಖಪ್ಪ ಮಾತನಾಡಿ, ಅವಘಡಗಳು ಉಂಟಾದ ಸಂದರ್ಭದಲ್ಲಿ ಯಾವುದೇ ಒಂದು ಜೀವ ಉಳಿಸಲು ಒಂದು ನಿಮಿಷದ ಪ್ರಥಮ ಚಿಕಿತ್ಸೆಯ ಅರಿವು ಅಗತ್ಯವಾಗಿದೆ, ಆ ಹಿನ್ನೆಲೆಯಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಜೆ.ಜೆ.ಎಂ ತುರ್ತು ಚಿಕಿತ್ಸ ವಿಭಾಗದ ಪ್ರಾಧ್ಯಪಕ ಡಾ.ಸುರೇಂದ್ರ ಮಾತನಾಡಿ, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬಹಳಷ್ಟು ಜನರು ಅಪಘಾತಕ್ಕಿಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಾರೆ. ಆದರೆ ಅದಕ್ಕೂ ಮುನ್ನ ಅವರನ್ನು ಹಾರೈಕೆ ಮಾಡುವ ವಿಧಾನದ ಬಗ್ಗೆ ಅನೇಕ ಸಣ್ಣಪುಟ್ಟ ವಿಚಾರ ನಮಗೆ ತಿಳಿದಿರುವುದಿಲ್ಲ. ಅಂತಹ ವಿಚಾರಗಳನ್ನು ತಿಳಿದಾಗ ಜೀವ ಉಳಿಸಲು ಅನುಕೂಲವಾಗುತ್ತದೆ ಎಂದು ಹೇಳಿದರಲ್ಲದೇ, ಪ್ರಾಥಮಿಕ ಚಿಕಿತ್ಸೆ ನೀಡುವುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದರಿಂದ ಸಮಾಜದಲ್ಲಿ ಜೀವ ರಕ್ಷಿಸಲು ಸಹಕಾರಿಯಾಗಲಿದೆ ಎಂದುರು.
ಕಾರ್ಯಕ್ರಮದಲ್ಲಿ ಎನ್.ಎಸ್ ಬಸವರಾಜು, ಆರೋಗ್ಯ ಶಿಕ್ಷಣಾಧಿಕಾರಿ ಚನ್ನಪ್ಪ, ತರಬೇತುದಾರರಾದ ಗೀತಾ, ಇಂದ್ರಾಣಿ, ಮೀನಾಜ್ ಹಕೀಂ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *