ಹೊನ್ನಾಳಿ : ಬಿಜೆಪಿ ಎಂದೂ ಮುಸ್ಲೀಂ ವಿರೋಧಿಯಲ್ಲಾ, ಅಲ್ಪಸಂಖ್ಯಾತರೆಲ್ಲರೂ ಭಯೋತ್ಪಾದಕರಲ್ಲಾ ಯಾರೋ ಕೆಲವರು ಮಾಡುವ ತಪ್ಪಿಗೆ ಸಂಘರ್ಷಗಳು ನಡೆಯುತ್ತಿವೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಕಾಂಗ್ರೆಸ್ ತೊರೆದು ರೇಣುಕಾಚಾರ್ಯ ಅವರ ಸಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ನಂತರ ಅವರು ಮಾತನಾಡಿದರು.
ಬೇವಿನಹಳ್ಳಿ ಗ್ರಾಮವು ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿಇರುವ ಗ್ರಾಮ. ನಮ್ಮ ನಿಮ್ಮ ಮಧ್ಯ ವಿಶ್ವಾಸ ಕೊರತೆಯಾದಾಗ ನಾವು ನೀವು ದೂರವಾಗಿದ್ದೇವೆ ಎಂದ ಅವರು, ಈ ಹಿಂದೆ ಕೊಟ್ಟ ಮಾತಿನಂತೆ ಗ್ರಾಮದಲ್ಲಿ ಸಿಸಿ ರಸ್ತೆ ಮಾಡಿಸಿದ್ದೇನೆ ಯಾವುದೇ ಕೆಲಸಗಳಿದ್ದರೂ ಅದನ್ನು ಮಾಡಿಕೊಡಲು ನಾನು ಸಿದ್ದನಿದ್ದೇನೆ. ಹಿಂದೂಗಳು ಹಾಗೂ ಮುಸ್ಲಿಂ ಬಾಂಧವರು ಸಹೋದರರಂತೆ ಬಾಳಬೇಕು ಎನ್ನುವುದು ನನ್ನ ಇಚ್ಚೆಯಾಗಿದೆ ಎಂದರು.
ಮಗು ಅತ್ತರೆ ತಾಯಿ ಹಾಲು ಕುಡಿಸುತ್ತಾಳೆ. ಗ್ರಾಮಕ್ಕೆ ಏನಾದರೂ ಬೇಕಾದರೆ ಅದನ್ನು ನೀವು ಕೇಳಬೇಕು. ಸಂಘರ್ಷದಿಂದ ವ್ಯಕ್ತಿಯ ಬದುಕು, ಕುಟುಂಬ ಹಾಗೂ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.
ಕೆಲ ಕಿಡಿಗೇಡಿಗಳ ಸಂಘರ್ಷದಿಂದ ಶಿವಮೊಗ್ಗದಲ್ಲಿ ಹರ್ಷ, ಪ್ರವೀಣ್ ನೆಟ್ಟಾರ್ ಹಾಗೂ ಮುಸ್ಲೀಂ ಯುವಕನ ಹತ್ಯೆಯಾಯಿತು. ಇದರಿಂದ ಭಾರತ ಮಾತೆ ಕಣ್ಣೀರು ಹಾಕುತ್ತಿದ್ದಾಳೆ. ಭಾರತ ಮಾತೆಯ ಮಕ್ಕಳು ಹತ್ಯೆಯಾಯಿಗುತ್ತಿದೆ ಎಂದ ಶಾಸಕರು, ಭಾರತ ಮಾತೆಯ ಮಕ್ಕಳು ಭಾರತ ಮಾತೆಗೆ ಜೈ ಎನ್ನ ಬೇಕೆ ವಿನಃ ಪಾಕಿಸ್ತಾನ್ ಜಿಂದಾಬಾದ್ ಎನ್ನಬಾರದು ಇದರಿಂದ ಸಂಘರ್ಷ ಏರ್ಪಡುತ್ತದೆ ಎಂದರು.
ತ್ರಿವಳಿ ತಲಾಕ್ ನಿಂದಾಗಿ ಸಾಕಷ್ಟು ಹೆಣ್ಣು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದರು. ಅದನ್ನು ಬೇಡ ಎಂದರೆ ಅದನ್ನು ವಿರೋಧಿಸಿದರೆ ಏನು ಮಾಡುವುದು ಎಂದು ಪ್ರಶ್ನಿಸಿದ ಶಾಸಕರು, ಧರ್ಮ ಧರ್ಮಗಳ ನಡುವೆ ಸಂಘರ್ಷ ಆಗಬಾರದು ನಮ್ಮ ಸ್ವಾರ್ಥಕ್ಕಾಗಿ ಧರ್ಮ ಧರ್ಮಗಳ ನಡುವೆ ಜಗಳ ಉಂಟು ಮಾಡಬಾರದು ಎಂದರು.
ಈ ದೇಶದಲ್ಲಿ ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿತ್ತು. ಕಾಂಗ್ರೆಸ್ ಬರೀ ಅಪಪ್ರಚಾರ ಮಾಡುವ ಕೆಲಸ ಮಾಡಿಕೊಂಡು ಬಂದು, ಓಟ್ಗಾಗಿ ನಮ್ಮ ನಿಮ್ಮ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಎಂದರೆ ಬೆಂಕಿ ಹಚ್ಚುವುದು ಎಂದ ಆಕ್ರೋಶ ಹೊರ ಹಾಕಿದರು.
ನಾವು ನೀವು ಭಾರತ ಮಾತೆಯ ಮಕ್ಕಳು. ನಾವು ಸ್ವಾರ್ಥಕ್ಕಾಗಿ ರಾಜಕಾರಣ ಮಾಡುವುದು ಬೇಡ, ನಿಮ್ಮಗಳಿಗೆ ಏನು ಮೂಲಭೂತ ಸೌಲಭ್ಯಗಳು ಬೇಕೋ ಅದನ್ನು ಕಲ್ಪಿಸಿಕೊಟ್ಟಾಗ ದೇಶ ಹಾಗೂ ಸಮಾಜ ಅಭಿವೃದ್ದಿಯಾಗುತ್ತದೆ ಅದಕ್ಕೆ ನಾನು ಬದ್ಧನಿದ್ದೇನೆ ಎಂದರು.
ಕಂಡವರ ಮಕ್ಕಳನ್ನು ಹಾಳು ಬಾವಿಗೆ ತಳ್ಳಿ ನಕ್ಕರೆ ನಾಳೆ ಅವರ ಮಕ್ಕಳಿಗೂ ಇದೇ ಪರಿಸ್ಥಿತಿ ಬರುತ್ತದೆ.
ನಾವು ನೀವು ಸಹೋದರರಾಗಿ ಕುಟುಂಬದ ಸದಸ್ಯರಾಗಿದ್ದಾಗ ಮಾತ್ರ ಕೆಲಸ ಆಗುತ್ತದೆ ಎಂದರು.
ಹಿಜಾಬ್ ದರಿಸುವ ವಿಚಾರವಾಗಿ ನಾನು ಮಾತನಾಡಿದ್ದೇನೆ ಏಕೆಂದರೆ ಶಾಲೆಯಲ್ಲಿ ಮಕ್ಕಳ ನಡುವೆ ವೈಮಸ್ಸು ಬರಬಾರದೆಂದು ಎಲ್ಲರೂ ಒಂದಾಗಿರಬೇಕೆಂದು ನಾನು ಮಾತನಾಡಿದ್ದೇನೆ ಅದನ್ನು ಕೆಲವರು ವಿರೋಧಿಸಿದರೆ ಏನು ಮಾಡುವುದು ಎಂದರು.
ಈ ಸಂದರ್ಭ ಗ್ರಾಮದ ನೂರಾರು ಮುಸ್ಲೀಂ ಭಾಂದವರು ಕಾಂಗ್ರೇಸ್ ತೊರೆದು ಬಿಜೆಪಿ ಸೇರ್ಪಡೆಯಾದರು, ಈ ವೇಳೆ ಗ್ರಾಮದ ಮುಖಂಡರು, ಗ್ರಾಮಸ್ಥರಿದ್ದರು.