ಹೊನ್ನಾಳಿ:
ಧರ್ಮಾಚರಣೆಯಿಂದ ಮನುಷ್ಯನ ಮನಸ್ಸಿಗೆ ಶಾಂತಿ, ನೆಮ್ಮದಿ ಲಭಿಸುತ್ತವೆ ಎಂದು ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಇಲ್ಲಿನ ಕೋಟೆಯ ಶ್ರೀ ದಿಡ್ಡಿ ಆಂಜನೇಯ ಸ್ವಾಮಿ ಸಂಸ್ಕøತ ಪಾಠಶಾಲೆಯಲ್ಲಿ ಶನಿವಾರ ನಡೆದ ಧರ್ಮಸಭೆಯಲ್ಲಿ “ಶ್ರೀ ಭಗವದ್ಗೀತಾ ಅಭಿಯಾನ” ಕುರಿತು ಮಾತನಾಡಿದರು.
ಇಂದಿನ ಯಾಂತ್ರಿಕ, ವೇಗದ ಯುಗದಲ್ಲಿ ಮನುಷ್ಯ ಎಲ್ಲ ಇದ್ದರೂ ಮನಶಾಂತಿ ಇಲ್ಲದೇ ಕಂಗಾಲಾಗಿದ್ದಾನೆ. ನಮ್ಮೊಳಗೇ ಇರುವ ಶಾಂತಿಯನ್ನು ಪಡೆದುಕೊಳ್ಳುವ ಮಾರ್ಗ ತಿಳಿಯದ ನಾವು ಬೇರೆಡೆ ಹುಡುಕುತ್ತಿದ್ದೇವೆ. ಇದಕ್ಕೆ ಧರ್ಮ ಮಾರ್ಗವೇ ಮದ್ದು ಎಂದು ತಿಳಿಸಿದರು.
ಶಿರಸಿ ತಾಲೂಕು ಮಠದೇವಳದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ವತಿಯಿಂದ ರಾಜ್ಯಾದ್ಯಂತ ಶ್ರೀ ಭಗವದ್ಗೀತಾ ಅಭಿಯಾನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಮೊದಲು ಪ್ರಾರಂಭಗೊಂಡ ಶ್ರೀ ಭಗವದ್ಗೀತಾ ಅಭಿಯಾನ ರಾಜ್ಯದಲ್ಲಿ ಸಂಪೂರ್ಣಗೊಳ್ಳಲು ನಾಲ್ಕು ವರ್ಷಗಳ ಸಮಯ ಹಿಡಿಯಿತು. ಬಳಿಕ ಕೊರೊನಾ ಕಾರಣದಿಂದಾಗಿ ಕಾರ್ಯಕ್ರಮ ನಡೆಸಲಾಗಲಿಲ್ಲ. ಇದೀಗ ಮತ್ತೆ ಅಭಿಯಾನ ಪ್ರಾರಂಭಗೊಂಡಿದೆ. ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಈ ವರ್ಷ ನಾವು ದಾವಣಗೆರೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಜಿಲ್ಲಾ ಕೇಂದ್ರದಲ್ಲಿ ನ.3ರಿಂದ ಶ್ರೀ ಭಗವದ್ಗೀತಾ ಅಭಿಯಾನ ಉದ್ಘಾಟನೆಗೊಳ್ಳಲಿದೆ. 4ರಿಂದ ವಿವಿಧ ತಾಲೂಕು ಕೇಂದ್ರಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಡಿಸೆಂಬರ್ 4ರಂದು ದಾವಣಗೆರೆಯಲ್ಲಿ ಮಹಾಸಮಾವೇಶ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಈ ವೇಳೆ ನಡೆಯುವ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡುವವರಿಗೆ ಅ.16ರಂದು ದಾವಣಗೆರೆಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ತರಬೇತಿ ನೀಡಲಾಗುವುದು. ಸಂಘಟಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿವರಿಸಿದರು.
ಶಿಕ್ಷಣ ಇಲಾಖೆಯ ಸಹಯೋಗದಲ್ಲಿ “ಶ್ರೀ ಭಗವದ್ಗೀತಾ ಅಭಿಯಾನ” ನಡೆಸಲಾಗುವುದು. ಅಭಿಯಾನದ ಅಂಗವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ 3 ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು. ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು. ಗೀತಾ ಕಂಠಪಾಠ ಸ್ಪರ್ಧೆಗೆ ಭಗವದ್ಗೀತೆಯ ಐದನೇ ಅಧ್ಯಾಯವನ್ನು ನಿಗದಿಪಡಿಸಲಾಗಿದೆ. ಭಾಷಣ, ರಸಪ್ರಶ್ನೆ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದು ತಿಳಿಸಿದರು.
ನೈತಿಕತೆಗೆ ಅಧ್ಯಾತ್ಮವೇ ತಳಹದಿ. ಭಗವದ್ಗೀತೆ ಬದುಕಿನಲ್ಲಿ ಅಧ್ಯಾತ್ಮಿಕತೆ ಜೊತೆಗೆ ಅತ್ಯುನ್ನತ ನೈತಿಕತೆಯನ್ನು ಅಭ್ಯಸಿಸುವುದನ್ನು ಕಲಿಸುತ್ತದೆ. ಹಾಗಾಗಿ, ಇಂದಿನ ಸಮಾಜಕ್ಕೆ ಭಗವದ್ಗೀತೆಯ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ಸಾಮಾನ್ಯವಾಗಿ ಒಂದು ಪುಸ್ತಕ 30 ವರ್ಷ ಅಸ್ತಿತ್ವದಲ್ಲಿರುತ್ತದೆ. ಮತ್ತೆ ಕೆಲ ಪುಸ್ತಕಗಳು ಒಂದು ನೂರು ವರ್ಷದಿಂದ ನಾಲ್ಕು ನೂರು ವರ್ಷಗಳಷ್ಟು ಕಾಲ ಅಸ್ತಿತ್ವದಲ್ಲಿರಬಹುದು. ಆದರೆ, ಭಗವದ್ಗೀತೆ ಎಂಬ ಮಹಾನ್ ಗ್ರಂಥ ಸುಮಾರು 7 ಸಾವಿರ ವರ್ಷಗಳಿಂದ ಅಸ್ತಿತ್ವದಲ್ಲಿದೆ. ಭಗವದ್ಗೀತೆಯ ಹೊರತಾಗಿ ಇತರ ಪುರಾತನ ಗ್ರಂಥಗಳೂ ನಮ್ಮಲ್ಲಿವೆ. ಆದರೆ, ಅವು ಭಗವದ್ಗೀತೆಯಷ್ಟು ವ್ಯಾಪ್ತಿ ಹೊಂದಿಲ್ಲ. ಹಾಗಾಗಿ, ಭಗವದ್ಗೀತೆ ಒಂದು ಅದ್ಭುತ ಗ್ರಂಥ ಎಂದು ಬಣ್ಣಿಸಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಧರ್ಮವೇ ಭರತ ಭೂಮಿಯ ಜೀವಾಳ. ಸನಾತನ ಧರ್ಮದ ಅಸ್ತಿತ್ವಕ್ಕೆ ಧರ್ಮ ಗುರುಗಳ ಮಾರ್ಗದರ್ಶನ, ಕೊಡುಗೆ ಅನನ್ಯ. ನಾವೆಲ್ಲರೂ ಧರ್ಮ ಮಾರ್ಗದಲ್ಲಿ ನಡೆದು ಮೋಕ್ಷ ಹೊಂದೋಣ ಎಂದು ತಿಳಿಸಿದರು.
ಹೊನ್ನಾಳಿ, ನ್ಯಾಮತಿ ಭಾಗಗಳಲ್ಲಿ ನಡೆಯುವ “ಶ್ರೀ ಭಗವದ್ಗೀತಾ ಅಭಿಯಾನ”ಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
“ಶ್ರೀ ಭಗವದ್ಗೀತಾ ಅಭಿಯಾನ” ಸಮಿತಿಯ ಹೊನ್ನಾಳಿ ತಾಲೂಕು ಘಟಕದ ಅಧ್ಯಕ್ಷ ಸಿ. ಸತ್ಯನಾರಾಯಣರಾವ್ ಇತರರು ಮಾತನಾಡಿದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಎನ್. ಜಯರಾವ್, ವಕೀಲರಾದ ಉಮಾಕಾಂತ್ ಜೋಯ್ಸ್, ಮುಖಂಡರಾದ ಶ್ರೀನಿವಾಸ್‍ರಾವ್ ನಾಡಿಗ್, ಗುರುದತ್, ಕುಮಾರಸ್ವಾಮಿ, ವಿನಿತಾ ಪ್ರಕಾಶ್, ಲಲಿತಾ ಭಾರ್ಗವ, ಜ್ಯೋತಿ ಹತ್ವಾರ್ ಇತರರು ಇದ್ದರು.