ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳು ಅಪಘಾತದಲ್ಲಿ (ಕರ್ತವ್ಯದ ಮೇಲೆ ಅಥವಾ ಕರ್ತವ್ಯದಲ್ಲಿ ಇಲ್ಲದಿರುವಾಗಲೂ) ಮೃತಪಟ್ಟರೆ ಅಥವಾ ಶಾಶ್ವತ / ಭಾಗಶಃ ಅಂಗವೈಕಲ್ಯಕ್ಕೆ ತುತ್ತಾದರೆ ಅವಲಂಬಿತರ ಹಿತ ಕಾಪಾಡುವ ದೃಷ್ಟಿಯಿಂದ ರೂ.50 ಲಕ್ಷ ಅಪಘಾತ ವಿಮಾ ಯೋಜನೆ ಜಾರಿಗೊಳಿಸಲಾಗಿದೆ.
ಸಿಬ್ಬಂದಿಗಳ ವೇತನ ಪ್ಯಾಕೇಜ್ ಅಪಘಾತ ವಿಮಾ ಯೋಜನೆಯ ಉಪಯೋಗ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೇತನ ಖಾತೆಯನ್ನು ಹೊಂದಿರುವ ನಿಗಮದ ನೌಕರರಿಗೆ ” ಪ್ರೀಮಿಯಂ ರಹಿತ” ವೈಯುಕ್ತಿಕ ಅಪಘಾತ ವಿಮೆಯನ್ನು ಒಳಗೊಂಡಿದೆ. ಈ ವೈಯುಕ್ತಿಕ ವಿಮಾ ಯೋಜನೆಯಿಂದ ಪಾಲಿಸಿದಾರರು ಅಫಘಾತದಲ್ಲಿ ಮೃತಪಟ್ಟಲ್ಲಿ ಅವರ ಅವಲಂಬಿತರಿಗೆ ರೂ.50 ಲಕ್ಷಗಳ ಪರಿಹಾರದ ಹಣ ಕೂಡಲೇ ದೊರೆಯಲಿದೆ. ಅಪಘಾತದಲ್ಲಿ ಸಿಬ್ಬಂದಿಗಳು ಶಾಶ್ವತವಾಗಿ ಪೂರ್ಣ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ರೂ.20 ಲಕ್ಷ ಪರಿಹಾರ ಹಾಗೂ ಶಾಶ್ವತ ಭಾಗಶ: ಅಂಗವೈಕಲ್ಯ ಉಂಟಾದಲ್ಲಿ ರೂ.10 ಲಕ್ಷಗಳ ವಿಮಾ ಪರಿಹಾರ ದೊರೆಯಲಿದೆ. ಕರ್ತವ್ಯ ನಿರತ ಹಾಗೂ ಕರ್ತವ್ಯದಲ್ಲಿ ಇಲ್ಲದ ಸಮಯದಲ್ಲೂ ಸಂಭವಿಸುವ ವೈಯಕ್ತಿಕ ಅಪಘಾತಗಳಿಗೂ ವಿಮೆ ಅನ್ವಯಿಸುತ್ತದೆ. ಸಿಬ್ಬಂದಿಗಳ ಅಪಘಾತದಲ್ಲಿನ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಗರಿಷ್ಟ ರೂ.10 ಲಕ್ಷ, ಔಷಧಗಳ ಆಮದಿಗಾಗಿ ಗರಿಷ್ಟ ರೂ.5 ಲಕ್ಷ, ಕೋಮಾದಲ್ಲಿ ಮೃತಪಟ್ಟರೆ ಹೆಚ್ಚುವರಿ ರೂ.2 ಲಕ್ಷ (ರೂ.50 ಲಕ್ಷ + ರೂ.2 ಲಕ್ಷ), ಏರ್ ಅಂಬ್ಯೂಲೆನ್ಸ್ ಸೇವೆಗೆ ರೂ.10 ಲಕ್ಷ ವಿಮಾ ಪರಿಹಾರ ನೀಡಲಾಗುವುದು. ಸಿಬ್ಬಂದಿಗಳು ಅಪಘಾತದಲ್ಲಿ ಮೃತಪಟ್ಟರೆ ಮಕ್ಕಳ ಪದವಿ ಶಿಕ್ಷಣಕ್ಕೆ ಗರಿಷ್ಟ ರೂ.5 ಲಕ್ಷ ಹಾಗೂ ಹೆಣ್ಣು ಮಗಳ ವಿವಾಹಕ್ಕೆ ಗರಿಷ್ಟ ರೂ.5 ಲಕ್ಷಗಳ ವರೆಗೆ ಆರ್ಥಿಕ ಸಹಾಯವನ್ನು ವಿಮಾ ಯೋಜನೆಯು ಒಳಗೊಂಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.