ಕೋಟಿ ಕಂಠ ಗಾಯನವು ಒಂದು ಅದ್ಭುತವಾದಂತಹ ಕಾರ್ಯಕ್ರಮವಾಗಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಮ್ಮೆಲ್ಲರ ಪುಣ್ಯ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಅರವತ್ತೇಳನೇ ಕರ್ನಾಟಕ ರಾಜ್ಯೋತ್ಸವವನ್ನು ಹೆಚ್ಚಿನ ಸಂಭ್ರಮ ಹಾಗೂ ಉತ್ಸಾಹಗಳಿಂದ ನಾಡಿನಾದ್ಯಂತ ಆಚರಿಸುವ ಹಿನ್ನೆಲೆಯಲ್ಲಿ ಘನ ಸರ್ಕಾರ ಕೋಟಿ ಕಂಠ ಗಾಯನವನ್ನು ಆಯೋಜಿಸಲಾಗಿದ್ದು, ಆಯ್ದ ಆರು ಕನ್ನಡ ಗೀತೆಗಳು ಏಕಕಾಲದಲ್ಲಿ ಎಲ್ಲರೂ ಹಾಡನ್ನು ಹಾಡಿ ಐತಿಹಾಸಿಕ ದಾಖಲೆ ಬರೆಯುವ ಮೂಲಕ ಕನ್ನಡ ನಾಡು ನುಡಿ ಸಂಸ್ಕøತಿಯನ್ನು ಸಂಭ್ರಮಿಸೋಣ ಎಂದರು.
ಕನ್ನಡ ನಾಡು ನುಡಿಯ ಶ್ರೇಷ್ಠತೆ ಸಾರುವ ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ ಮತ್ತು ಬಾರಿಸು ಕನ್ನಡ ಡಿಂಡಿಮವ’, ಹುಯಿಲಗೊಳ ನಾರಾಯಣರಾಯ ವಿರಚಿತ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ಡಾ.ಡಿ.ಎಸ್ ಕರ್ಕಿ ವಿರಚಿತ ‘ಹಚ್ಚೇವು ಕನ್ನಡದ ದೀಪ’, ಚನ್ನವೀರ ಕಣವಿ ಅವರ ‘ವಿಶ್ವ ವಿನೂತನ ವಿದ್ಯಾಚೇತನ’ ಹಾಗೂ ಹಂಸಲೇಖ ವಿರಚಿತ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಕನ್ನಡ ಗೀತೆಗಳು ಕೋಟಿಕಂಠ ಗಾಯನದಲ್ಲಿ ಮೊಳಗಿದವು.
ವಿದ್ಯಾರ್ಥಿಗಳ ಅಭಿಪ್ರಾಯ:ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಹೊಸ ಅನುಭವ ನೀಡಿದೆ. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಕನ್ನಡ ಗೀತೆಗಳ ಹಾಡಿದ್ದು ಸಂತೋಷ ಉಂಟು ಮಾಡಿದೆ.
-ಖುಷಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಮೃತ ವಿದ್ಯಾಲಯ.
 ಕನ್ನಡ ನಾಡು ನುಡಿಯ ಕುರಿತು ಅಭಿಮಾನ ಬೆಳೆಸಲು ಹಾಗೂ ಕನ್ನಡಿಗರ ಒಗ್ಗಟ್ಟು ಪ್ರದರ್ಶಿಸಲು ಸರ್ಕಾರ ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜಿಸಿದ್ದು ಉತ್ತಮ ಬೆಳವಣಿಗೆಯಾಗಿದೆ, ಮುಂದಿನ ದಿನಗಳಲ್ಲಿ ಇಂತಹ ಹೊಸ ಬಗೆಯ ಕಾರ್ಯಕ್ರಮ ಆಯೋಜಿಸಲಿ.
-ಅಭಿμÉೀಕ್, ಪ್ರಥಮ ಪಿಯುಸಿ ವಿದ್ಯಾರ್ಥಿ ಮಾಗನೂರು ಬಸಪ್ಪ ಕಾಲೇಜ್.
   ಶಾಲೆಗಳಲ್ಲಿ ಕೇವಲ ನಾಲ್ಕೈದು ಜನ ಸೇರಿ ಗುಂಪಾಗಿ ಹಾಡುತ್ತಿದ್ದೇವು, ಆದರೆ ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಅಧಿಕಾರಿಗಳು, ಇತರೆ ಶಾಲೆಗಳ ಸಹಪಾಠಿಗಳೊಂದಿಗೆ ಏಕಕಾಲದಲ್ಲೇ ಹಾಡಲು ಅವಕಾಶ ದೊರಕಿದ್ದು ಇದರಿಂದ ಕನ್ನಡದ ಬಗ್ಗೆ ಅಭಿಮಾನ ಹೆಚ್ಚಿಸಿದೆ.
-ಶುಭನಾಯ್ಕ್, ಎಂಟನೇ ತರಗತಿ ವಿದ್ಯಾರ್ಥಿನಿ ಸಿದ್ದಗಂಗಾ ಶಾಲೆ.
ಈ ವೇಳೆ ಜಿಲ್ಲಾಧಿಕಾರಿ ಶಿವಾನಂದ ಕಾಪಾಶಿಯವರು ಕೋಟಿಕಂಠ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಸಂಕಲ್ಪ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ಕನ್ನಡಪರ ಹೋರಾಟಗಾರರು, ಕಲಾತಂಡಗಳು, ಮಾಗನೂರು ಬಸಪ್ಪ ಕಾಲೇಜು, ಸಿದ್ದಗಂಗಾ ವಿದ್ಯಾಸಂಸ್ಥೆ, ಅಮೃತ ವಿದ್ಯಾಲಯ, ವಿಶ್ವಚೇತನ ಶಾಲೆ-ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಗಣ್ಯರು ಭಾಗವಹಿಸಿದ್ದರು.
ಜಿಲ್ಲೆಯ ವಿವಿಧೆಡೆ ಕೋಟಿ ಕಂಠ ಗಾಯನ ಕಾರ್ಯಕ್ರಮ : ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಲಯ, ಜಿಲ್ಲಾ ಕ್ರೀಡಾಂಗಣ, ಮಹಾನಗರ ಪಾಲಿಕೆ, ತಹಶೀಲ್ದಾರ ಕಾರ್ಯಲಯದ ಆವರಣ, ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ಮತ್ತು ಎಲ್ಲಾ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯ, ಸರಕಾರಿ ಕಚೇರಿಗಳಲ್ಲಿ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *