ಗ್ರಾಮಗಳ
ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಸುಸ್ಥಿರ
ಅಭಿವೃದ್ಧಿಗೆ ಐದು ವರ್ಷಗಳ ಅವಧಿಯ ದೂರು ದೃಷ್ಟಿ
ಯೋಜನೆಯನ್ನು ಕಾಲಮಿತಿಯೊಳಗೆ ರೂಪಿಸಲು
ನಗರಾಭಿವೃದ್ಧಿ ಖಾತೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ
ಸಚಿವರಾದ ಬಿ.ಎ.ಬಸವರಾಜ(ಬೈರತಿ) ಅವರು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ
ಗ್ರಾಮ ಪಂಚಾಯತಿಗಳ ದೂರು ದೃಷ್ಟಿ ಯೋಜನೆ
ತಯಾರಿಕಾ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು,
ಯಾವ ಗ್ರಾಮ ಯಾವ ಕ್ಷೇತ್ರದಲ್ಲಿ ಹಿಂದುಳಿದೆ ಎಂಬುದನ್ನು
ಗುರುತಿಸಿ. ಮನೆ ಮನೆ ಸಮೀಕ್ಷೆಮಾಡಿ ದತ್ತಾಂಶ ಸಂಗ್ರಹಿಸಿ.
ಗ್ರಾಮದ ಸ್ವ ಸಹಾಯ, ಸಮುದಾಯ ಸಂಘಟನೆಗಳು
ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದು
ಸುಸ್ಥಿರ ಸಮಗ್ರ ಅಭಿವೃದ್ಧಿ ಯೋಜನೆ ತಯಾರಿಕೆ ಆದ್ಯತೆ
ನೀಡಬೇಕು ಎಂದರು.
ಯೋಜನೆ ರೂಪಿಸುವಾಗ ಗ್ರಾಮಗಳ ಬಡತನ ನಿವಾರಣೆ,
ಜೀವನ ಸುಧಾರಣೆ ಹಾಗೂ ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಿ,
ಆರೋಗ್ಯ, ಶಿಕ್ಷಣ ವಲಯ, ಪರಿಸರ ಮತ್ತು ನೈಸರ್ಗಿಕ
ಸಂಪನ್ಮೂಲಗಳ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು
ಸಾಮಾಜಿಕ ಸುರಕ್ಷತೆ, ಮೂಲ ಸೌಕರ್ಯಗಳ ಸ್ವಾವಲಂಬಿ
ಗ್ರಾಮಗಳಾಗಿ ಅಭಿವೃದ್ಧಿ, ಉತ್ತಮ ಆಡಳಿತ ಸೇರಿದಂತೆ 17
ಅಂಶಗಳ ಆಧರಿಸಿ ಸುಸ್ಥಿರ ಅಭಿವೃದ್ಧಿ ತಯಾರಿಕೆಗೆ
ಕ್ರಮವಹಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಹಣಾಧಿಕಾರಿ ಡಾ.ಎ ಚನ್ನಪ್ಪ ಮಾತನಾಡಿ, ಕರ್ನಾಟಕ
ಗ್ರಾಮ ಪಂಚಾಯತ್ ಅಧಿನಿಯಮ 1993ರ ಪ್ರಕರಣ 309ಬಿ
ಅರನ್ವಯ ಎಲ್ಲ ಗ್ರಾಮ ಪಂಚಾಯತಿಗಳು ಹೊಸದಾಗಿ
ರಚನೆಯಾದ ತರುವಾಯು ಮುಂದಿನ ಐದು ವರ್ಷ ಅವಧಿಗೆ
ದೂರದೃಷ್ಟಿ ಯೋಜನೆ ಸಿದ್ಧಪಡಿಸಬೇಕಾಗಿದೆ. ಗ್ರಾಮಗಳ
ಹಿಂದುಳಿದಿರುವ ಕ್ಷೇತ್ರಗಳನ್ನು ಗುರುತಿಸಿ ಸುಸ್ಥಿರ
ಅಭಿವೃದ್ಧಿಗೆ ಆದ್ಯತೆ ನೀಡಿ ಯೋಜನೆ ತಯಾರಿಸಲಾಗುವುದು.
17 ಅಂಶಗಳ ಆಧಾರಿತವಾಗಿರುವ ದತ್ತಾಂಶಗಳನ್ನು
ಸಂಗ್ರಹಿಸಲು ಮನೆ ಮನೆಗೆ ಭೇಟಿ ನೀಡಿ ಮಾಹಿತಿ
ಸಂಗ್ರಹಿಸಲಾಗುವುದು. ಗ್ರಾಮ ಸಭೆಯಲ್ಲಿ ಚರ್ಚಿಸಿ
ಅನುಮೋದನೆಯೊಂದಿಗೆ ಯೋಜನೆಯನ್ನು
ಅಂತಿಮಗೊಳಿಸಲಾಗುವುದು. ಗ್ರಾಮ ಪಂಚಾಯತ್
ದೂರು ದೃಷ್ಟಿ ಯೋಜನೆ ತಯಾರಿಕೆಗೆ ತರಬೇತಿ
ಆಯೋಜಿಸಲಾಗಿದೆ ಎಂದರು.
ಸಮಾರಂಭದಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ್,
ಮಹಾಪೌರರಾದ ಜಯಮ್ಮ ಗೋಪಿನಾಥ್ ಜಿಲ್ಲಾಧಿಕಾರಿ ಶಿವಾನಂದ
ಕಾಪಾಶಿ, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಮಹಾನಗರ ಪಾಲಿಕೆ
ಆಯುಕ್ತರಾದ ವಿಶ್ವನಾಥ ಮುದ್ದಜ್ಜಿ ಉಪಸ್ಥಿತರಿದ್ದರು.