ನ್ಯಾಮತಿ ಃ ದಾನ, ಭೋಗ, ನಾಶ- ಎಂದು ಹಣಕ್ಕೆ ಮೂರು ಗತಿಗಳುಂಟು. ಯಾರೊ ದಾನ ಮಾಡುವುದಿಲ್ಲವೋ, ತಾನೂ ಭೋಗಿಸುವುದಿಲ್ಲವೋ,ಅವನ ಹಣಕ್ಕೆ ಮೂರನೇ ಗತಿ ಎಂದರೆ ನಾಶ ಉಂಟಾಗುತ್ತದೆ ಎಂದು ಹೊಟ್ಯಾಪುರ ಕ್ಷೇತ್ರದ ಉಜ್ಜಯನಿ ಶಾಖಾ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು.
ಅವರು ನ್ಯಾಮತಿ ತಾಲೂಕಿನ ಗೋವಿನಕೋವಿ ಗ್ರಾಮದ ಹಾಲಸ್ವಾಮೀಜಿ ಬೃಹನ್ಮಠದಲ್ಲಿ ಗುರುವಾರ ಆಯೋಜಿಸಿದ ಲಿಂಗೈಕ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮಿಜಿಯ 29ನೇ ವರ್ಷದ ಹಾಗೂ ಶ್ರೀ ಸದ್ಗುರು ಶಿವಯೋಗಿ ಹಾಲಸ್ವಾಮಿಜಿಯ 11ನೇ ವರ್ಷದ ಪುಣ್ಯಾರಾಧನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಧನ ಶಬ್ಧದಿಂದ ಧಾನ್ಯ ಶಬ್ಧ ಹುಟ್ಟಿದೆ. ಒಂದು ಕಾಲದಲ್ಲಿ ಧಾನ್ಯವೇ ಧನವೆನಿಸಿತ್ತು. ಧಾನ್ಯವನ್ನು ಬಹುಕಾಲ ಕೂಡಿಹಾಕಿದರೆ ನಾಶವಾಗುತ್ತದೆ.ಅದರ ವಿನಿಯೋಗ ಆಗುತ್ತಲೇ ಇರಬೇಕು. ತಿನ್ನಬೇಕು ಅಥವಾ ತಿನ್ನಲು ಇಲ್ಲದವರಿಗೆ ದಾನ ಕೊಡಬೇಕು.ಹೀಗೆ ಮಾಡುವವನೇ ಧನ್ಯ. ಗಾಳಿ ಶುದ್ಧವಾಗಿರಬೇಕಾದರೆ ಬೀಸುತ್ತಿರಬೇಕು, ನೀರು ಶುದ್ಧವಾಗಿರಬೇಕಾದರೆ ಹರಿಯುತ್ತಿರಬೇಕು, ಹಣವು ಉಪಯೋಗವಾಗುತ್ತಿದ್ದರೆ ಮಾತ್ರ ಅದಕ್ಕೆ ಬೆಲೆ. ಸರಿಯಾದ ಸಮಯಕ್ಕೆ ಉಪಯೋಗವಾಗದಿದ್ದರೆ ಹೂ ಬಾಡುತ್ತೆ, ಹಣ್ಣು ಕೊಳೆಯುತ್ತದೆ, ಹಣ ಕಂಡವರ ಪಾಲಾಗುತ್ತದೆ , ಸಿರಿತನ , ಬಡತನ ಶಾಶ್ವತವಲ್ಲ. ನಮ್ಮಲ್ಲಿನ ಐಶ್ವರ್ಯ ಸತ್ಕಾರ್ಯಕ್ಕೆ ಬಳಕೆಯಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಬೀದರ್ ಜಿಲ್ಲೆಯ ಮಂಠಾಳ ವಿರಕ್ತಮಠದ ಮಲ್ಲಿಕಾರ್ಜುನ ದೇವರು ಮಾತನಾಡಿ ಇಲ್ಲಿ ಇದ್ದು ಬದುಕಿದವರು ಇದ್ದು ಸತ್ತವರು ಸತ್ತು ಬದುಕಿದವರು ಇವರಲ್ಲಿ ಸತ್ತು ಬದುಕಿದವರು ಶ್ರೇಷ್ಠ ಈ ನೆಲದಲ್ಲಿ ಸಾಮಾನ್ಯ ವ್ಯಕ್ತಿ ಗುದ್ದಿಗೆ ಹೋಗುತ್ತಾರೆ ಮಹಾತ್ಮರು ತಪಸ್ವಿಗಳು ಗದ್ದುಗೆ ಆಗುತ್ತಾರೆ ಇತಂಹವರಿಗೆ ಮಹಾತ್ಮರು , ಪುಣ್ಯಾತ್ಮರು ಎಂದು ಕೆರೆಯುತ್ತಾರೆ ಈ ಸಾಲಿನಲ್ಲಿ ಸಿದ್ದಗಂಗಾ ಶ್ರೀಗಳು , ಶ್ರೀಮಠ ಹಾಲಸ್ವಾಮೀಜಿಯವರು ಎಂದು ತಿಳಿಸಿದರು.
ನೇತೃತ್ವ ವಹಿಸಿದ್ದ ಶ್ರೀ ಮಠದ ಉತ್ತರಾಧಿಕಾರಿ ಶ್ರೀ ಸದ್ಗುರು ಶಿವಯೋಗಿ ಮಹಾಲಿಂಗ ಹಾಲಸ್ವಾಮಿಜಿ ಮಾತನಾಡಿ, ಗುರುಗಳ ಅಪ್ಪಣೆಯಂತೆ ಭಕ್ತರ ಶ್ರೇಯೋಭಿವೃದ್ಧಿಯೊಂದನ್ನೇ ಗುರಿಯಾಗಿಟ್ಟುಕೊಂಡು ನಡೆ ನುಡಿ, ಸಮಾಜವನ್ನು ಸಮಾನವಾಗಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೇಲ್ಲರ ಕರ್ತವ್ಯ ಎಂದರು.
ಸಮಾರಂಭದಲ್ಲಿ ಹೊನ್ನಾಳಿ ಎಂ.ಎಸ್.ಶಾಸ್ತ್ರೀಹೊಳೆಮಠ್ , ಹೊಲಳೂರು ಶಿವಲಿಂಗಯ್ಯಶಾಸ್ತ್ರೀ , ರೇಣುಕಯ್ಯಸ್ವಾಮಿ , ಕೆ.ಎನ್.ವಿನಯ್ , ವಿಶ್ವನಾಥ್ , ವೀರಭದ್ರಸ್ವಾಮಿ ಧರ್ಮಸಭೆ ಕುರಿತು ಮಾತನಾಡಿದರು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲೇಶಪ್ಪ , ಶ್ರೀ ಹಾಲಸ್ವಾಮಿ ಸೇವಾ ಸಮಿತಿ ಗೌರವ ಅಧ್ಯಕ್ಷ ಎಚ್ ಪಾಲಾಕ್ಷಪ್ಪ ಗೌಡರು ಅಧ್ಯಕ್ಷ ಎಸ್ ಇ ರಮೇಶ್ , ಕಾರ್ಯದರ್ಶಿ ವಿ ಎಚ್ ರುದ್ರೇಶ್ , ಸದಸ್ಯ ಕೆ.ಎಚ್.ಶಿವಮೂರ್ತಪ್ಪ , ಗಂಗಾಧರಪ್ಪ ಸೇರಿದಂತೆ ಇತರರು ಇದ್ದರು.