ಹುಣಸಘಟ್ಟ: ಗ್ರಾಮೀಣ ವಿದ್ಯುತ್ ಸಮಸ್ಯೆಗಳು ತಕ್ಷಣ ಪರಿಹಾರ ಕಲ್ಪಿಸುವುದಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿರುವ ಮಹಾಕಾಂಕ್ಷೆಯ ಜನಸ್ನೇಹಿ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೊನ್ನಾಳಿ ತಾಲೂಕು ಬೆಸ್ಕಾಂ ಉಪ ವಿಭಾಗಾಧಿಕಾರಿ ಎಇಇ ರವಿಕಿರಣ ಹೇಳಿದರು
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ ಆಯೋಜಿಸಿದ ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ವಿದ್ಯುತ್ ಸಮಸ್ಯೆಗಳ ರೈತರ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಸರ್ಕಾರಿ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಬೇಕು ಹಾಗೂ ಜನರ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕೆಂಬ ಉದ್ದೇಶದಿಂದ ಎಲ್ಲ ಇಲಾಖೆಗಳಲ್ಲಿ ಜನಸ್ನೇಹಿ ಕಾರ್ಯಕ್ರಮ ಜಾರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ವಿದ್ಯುತ್ ಅದಾಲತ್ ಮೂಲಕ ಗ್ರಾಮೀಣ ವಿದ್ಯುತ್ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಮತ್ತು ಘನ ಸರ್ಕಾರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಎಲ್ಲಾ ಬಡತನ ರೇಖೆ ಗಳಿಗಿಂತ ಕೆಳಗಿರುವ ಬಿಪಿಎಲ್ ಕುಟುಂಬಕ್ಕೆ ಮಾಸಿಕ 75 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುವುದು. ಅರ್ಹ ಫಲಾನುಭವಿಗಳು ಬಿಪಿಎಲ್ ಕಾರ್ಡು ಜೆರಾಕ್ಸ್, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ ಬ್ಯಾಂಕ್ ಖಾತೆ ಜೆರಾಕ್ಸ್ ಅರ್ಜಿ ಈ ಕರ ಪತ್ರದ ಹಿಂದೆಲಗತ್ತಿಸಿ ನೀಡುವಂತೆ ತಿಳಿಸಿದರು.
ಸಾಸ್ವೇಹಳ್ಳಿ ಬೆಸ್ಕಾಂ ಕಚೇರಿಯ ಕಿರಿಯ ಅಭೀಯಂತರ ಅಧಿಕಾರಿ ಕಾಂತರಾಜ್ ಮಾತನಾಡಿ ಜೀವ ಜೀವನ ಅಮೂಲ್ಯವಾದದ್ದು ವಿದ್ಯುತ್ ಲೈನ್ ಹಾದು ಹೋಗಿರುವ ತೋಟಗಳಲ್ಲಿ ರೈತರು ಅಡಿಕೆ ಕೊಯ್ಲು ಮಾಡುವಾಗ ಅಲ್ಯೂಮಿನಿಯಂ ದೋಟಿಗಳನ್ನು ಬಳಸಬಾರದು. ಬಿದಿರಿನ ಗಳ ಬಳಸಿ ಕೊಯ್ಲು ಮಾಡುವುದು ಉತ್ತಮ. ಇತ್ತೀಚಿಗೆ ನಮ್ಮ ಸುತ್ತಮುತ್ತಲ ಗ್ರಾಮಗಳಲ್ಲಿ ಕೂಲಿ ಕಾರ್ಮಿಕರು ಅಲುಮಿನಿಯಂ ದೋಟಿ ಬಳಸಿ ಅಡಿಕೆ ಕೊಯ್ಲು ಮಾಡುವಾಗ ವಿದ್ಯುತ್ ತಂತಿಗಳಿಗೆ ತಗುಲಿ ಕಾರ್ಮಿಕರು ಸಾವು ಕಂಡಿರುವ ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವ ತೋಟದ ಮಾಲೀಕರು ಅಡಿಕೆ ಕೊಯ್ಲು ಮಾಡುವಾಗ ಬೆಸ್ಕಾಂ ಕಚೇರಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಡಿಕೆ ಕೊಯ್ಲು ಮಾಡುವಂತೆ ತಿಳಿಸಿದರು.
ವಿದ್ಯುತ್ ಅದಾಲತ್ ಕಾರ್ಯಕ್ರಮದಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ, ಗ್ರಾಂಪಂ ಸದಸ್ಯರಾದ ರಮೇಶ್, ಗಾಯಿತ್ರಮ್ಮ, ಗ್ರಾಮದ ಮುಖಂಡರಾದ ಶಿವಾನಂದಯ್ಯ ಆನಂದಪ್ಪ ಸೇರಿದಂತೆ ಹೊಟ್ಯಾಪುರ ರಾಂಪುರ ಬಳ್ಳಾಪುರ ಗ್ರಾಮದ ನೂರಾರು ರೈತರು ಉಪಸ್ಥಿತರಿದ್ದು ವಿದ್ಯುತ್ ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.