ಹೊನ್ನಾಳಿ:
ತಾಲೂಕಿನ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಬುಧವಾರ ರಾತ್ರಿ ವೈಭವದ ಕಾರ್ತಿಕೋತ್ಸವ ಪಾರಂಪರಿಕ ಶ್ರದ್ಧಾ-ಭಕ್ತಿಗಳಿಂದ ನೆರವೇರಿತು. ಕಾರ್ತಿಕೋತ್ಸವದ ಪ್ರಯಕ್ತ ಶ್ರೀ ಆಂಜನೇಯ ಸ್ವಾಮಿಯ ಸಣ್ಣ ತೇರು ನಡೆಯಿತು.
ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿನ ದೀಪಮಾಲೆ ಕಂಬದಲ್ಲಿ ದೀಪೋತ್ಸವ ವೈಭವದಿಂದ ನೆರವೇರಿತು.
ತುಳಸೀಕಟ್ಟೆ, ಶ್ರೀ ರಾಮ, ಸೀತಾದೇವಿ, ಲಕ್ಷ್ಮಣ ದೇವಸ್ಥಾನ ಸೇರಿದಂತೆ ಕುಂದೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿನ ಎಲ್ಲಾ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜಗೋಪುರಕ್ಕೆ ಕುಂದೂರು ಗ್ರಾಮದ ಯುವಕರು ವಿದ್ಯುತ್ ದೀಪಾಲಂಕಾರದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಆಗಮಿಸಿದ ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಸಿ.ಕೆ. ಶೇಖರಪ್ಪ, ಪ್ರಧಾನ ಅರ್ಚಕ ಕೆ.ಎಸ್. ಶ್ರೀನಿವಾಸ್ ತಿಳಿಸಿದರು.
ಕುಂದೂರು ಉಪ ತಹಸೀಲ್ದಾರ್ ಮಂಜುನಾಥ ಕೆ.ಇಂಗಳಗುಂದಿ, ರಾಜಸ್ವ ನಿರೀಕ್ಷಕ ಬಿ.ಎಂ. ರಮೇಶ್, ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಶ್ರೀಕಾಂತ್, ಗ್ರಾಮದ ಮುಖಂಡರು ಇದ್ದರು.