ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಇರುತ್ತಿದ್ದವು, ಈಗ ವಿಭಕ್ತ ಕುಟುಂಬಗಳು ಅಧಿಕವಾಗಿವೆ. ಇದರಿಂದ ಕುಟುಂಬ ಎಂದರೆ ಹೇಗೆ ಇರಬೇಕು ಎಂಬುದರ ಅರಿವು ಈಗಿನ ಯುವ ಸಮೂಹಕ್ಕೆ ಇರುವುದಿಲ್ಲ. ಹಾಗಾಗಿ ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ತಿಳುವಳಿಕೆ ನೀಡಬೇಕು ಎಂದು ಜಿ.ಪಂ ಸಿಇಓ ಡಾ.ಎ ಚೆನ್ನಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿಶು ಅಭಿವೃದ್ದಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ, ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಐಕ್ಯತೆ ಸಂರಕ್ಷಿಸುವ ಪ್ರಮಾಣ ಬೋಧಿಸಿ ಅವರು ಮಾತನಾಡಿದರು.
ನಮ್ಮದು ಸನಾತನ ಸಂಸ್ಕøತಿಯ ದೇಶವಾಗಿದೆ, ಎಲ್ಲಿ ನಾರಿಯರನ್ನು ಗೌರವಿಸುತ್ತಾರೋ ಹಾಗೂ ಪೂಜಿಸುತ್ತಾರೋ ಅಲ್ಲಿ ದೇವತೆಗಳು ವಾಸವಾಗಿರುತ್ತಾರೆ. ಸಂಬಂಧಗಳ ಬಗ್ಗೆ ಅರಿವು ಮೂಡಿಸಬೇಕು. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಆರ್.ಸಿ.ಹೆಚ್. ಅಧಿಕಾರಿ ಡಾ.ಮೀನಾಕ್ಷಿ ಮಾತಾನಾಡಿ, ಮಹಿಳೆಯರಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಶೇ. 33 ರಷ್ಟು ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 50 ಮೀಸಲಾತಿ ಇದೆ. ಮಹಿಳೆಗೆ ತಾಳ್ಮೆ, ಸಹನೆ ಹೆಚ್ಚಾಗಿದೆ. 12ನೇ ಶತಮಾನದ ಕಾಲದಲ್ಲಿಯೇ ಅಕ್ಕಮಹಾದೇವಿ, ತಮ್ಮ ವಚನಗಳ ಮೂಲಕ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೊಡುಗೆ ನೀಡಿ, ಮಹಿಳೆ ಸ್ಥಾನವನ್ನು ಅತಿ ಎತ್ತರಕ್ಕೆ ತಂದಿದ್ದರು. ತಾಯಿ ಸಮಾಜದ ಅರಿವಿನ ಪಾಠ ಕಳಿಸುತ್ತಾಳೆ, ಸಂಸಾರದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸುವಲ್ಲಿ ಶ್ರಮಿಸುತ್ತಾಳೆ. ಎಂದರು.
ನಮ್ಮ ಹಿರಿಯರ ಸಾಂಪ್ರಸಾಯಿಕ ಆಹಾರ ಪದ್ಧತಿ ತುಂಬಾ ಆರೋಗ್ಯಕರವಾಗಿತ್ತು, ಋತುಮಾನಕ್ಕೆ ತಕ್ಕಂತೆ ಆಹಾರ ಸೇವನೆ ಮಾಡುತ್ತಿದ್ದರು. ಆಧುನಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು ಆರೋಗ್ಯಕಾಪಾಡಿಕೊಬೇಕು ಎಂದು ಸಲಹೆ ನೀಡಿದರು.
ಭಾರತೀಯ ಸಮಾಜದಲ್ಲಿ ಮಹಿಳೆಯರ ಪ್ರಾಮುಖ್ಯತೆ, ರಾಷ್ಟ್ರ ನಿರ್ಮಾಣ ಹಾಗೂ ಪ್ರಗತಿಯಲ್ಲಿ ಅವರ ಪಾತ್ರ ಹಾಗೂ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆ ಹಾಗೂ ಮಹಿಳಾ ದೌರ್ಜನ್ಯ ತಡೆ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ವಿನ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ದೂರು ಸಮಿತಿ ಸದಸ್ಯರಾದ ಅಮೀತಾಬಾನು, ವಕೀಲರಾದ ಅನಿತಾ.ಸಿ.ಪಿ, ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಎ.ಎಂ ಇತರರಿದ್ದರು.