ಹುಣಸಘಟ್ಟ : ತಾಲೂಕಿನ ಬಹುತೇಕ ಶಾಲೆಗಳಲ್ಲಿ ಹಲವು ಶಿಕ್ಷಕರು 5 ರಿಂದ 10 ವರ್ಷಗಳಾದರೂ ಒಂದೇ ಶಾಲೆಯಲ್ಲಿ ತಮ್ಮ ಪ್ರಭಾವ ಬೀರಿ ಬೇರೂರಿದ್ದಾರೆ ಶಾಲಾ ಅವಧಿಯಲ್ಲಿ ಮಕ್ಕಳಿಗೆ ಸರಿಯಾಗಿ ಪಾಠ ಪ್ರವಚನ ಮಾಡುತ್ತಿಲ್ಲ ಇದನ್ನು ತಾಲೂಕು ಸಮನ್ವಯ ವೇದಿಕೆ ಸಹಿಸುವುದಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಂತಹ ಶಿಕ್ಷಕರನ್ನು ತಕ್ಷಣ ವರ್ಗಾವಣೆಗೊಳಿಸಬೇಕು ಎಂದು ತಾಲೂಕು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ತೀವ್ರ ಅಕ್ಷೇಪ ವ್ಯಕ್ತಪಡಿಸಿದರು.
ಹೋಬಳಿ ಸಾಸ್ವೆಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳು ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸದೆ ಅನಾವಶ್ಯಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ದೂರಿನ ಕುರಿತ ಉಲ್ಲೇಖ ಪ್ರತಿಯಂತೆ ಶಿಕ್ಷಕ ಸಂಘದ ಪದಾಧಿಕಾರಿಗಳು ಶಾಲೆಗಳಲ್ಲಿ ಪಾಠ ಪ್ರವಚನ ಮಾಡದೆ ಪ್ರತಿದಿನ ಸಂಘದ ಸಭೆ ಮತ್ತು ಇನ್ನಿತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಅನಗತ್ಯವಾಗಿ ತೊಡಗಿಸಿಕೊಂಡು ಕರ್ತವ್ಯ ಲೋಪ ಎಸಗಿರುವ ಬಗ್ಗೆ ಆರೋಪವಿದ್ದು ಇದನ್ನು ತಾಲೂಕು ಎಸ್ ಡಿ ಎಂ ಸಿ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ ಎಂದರು.
ನಮ್ಮ ತಾಲೂಕಿನಲ್ಲಿಯೂ ಬಹುತೇಕ ಶಾಲೆಗಳಲ್ಲಿ ಕೆಲವು ಶಿಕ್ಷಕರು ಒಂದೇ ಕಡೆ ಬೇರೂರಿ ಶಾಲೆಗಳಲ್ಲಿ ಸರಿಯಾಗಿ ಪಾಠ ಪ್ರವಚನ ಮಾಡದೆ ಶಾಲಾ ಅವಧಿಯಲ್ಲಿ ತಮ್ಮ ತೋಟ ಮನೆ ಜಮೀನು ರಿಯಲ್ ಎಸ್ಟೇಟ್ ಗಳ ದಂಧೆಗಳ ಬಗ್ಗೆ ಅನಾವಶ್ಯಕವಾಗಿ ಚರ್ಚಿಸುತ್ತಾ ಕಾಲಹರಣ ಮಾಡುತ್ತಾ ಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಇದನ್ನು ಅಲ್ಲಿನ ಎಸ್ ಡಿ ಎಂ ಸಿ ಯವರು ಶಿಕ್ಷಕರಿಗೆ ಶಾಲೆಗೆ ಸರಿಯಾದ ಸಮಯಕ್ಕೆ ಬನ್ನಿ ಶಾಲಾ ಅವಧಿಯಲ್ಲಿ ಮಕ್ಕಳಿಗೆ ಪಾಠ ಮಾಡಿ ಎಂದು ಪ್ರಶ್ನಿಸಿದ್ದಕ್ಕೆ ಎಸ್ ಡಿ ಎಂ ಸಿ ಯವರಿಗೆ ತಮ್ಮ ಪ್ರಭಾವ ಬಳಸಿ ನಿಂದಿಸಲಾಗಿದೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದರು ಏನು ಕ್ರಮ ಜರುಗಿಸಿರುವುದಿಲ್ಲ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದೇವೆ. ಶಿಕ್ಷಕ ಸಂಘದ ಪದಾಧಿಕಾರಿಗಳು ಶಾಲಾ ಅವಧಿ ಸಮಯದಲ್ಲಿ ಕರ್ತವ್ಯ ನಿರ್ವಹಿಸಿ. ಶಾಲಾ ಅವಧಿ ನಂತರ ಮತ್ತು ರಜಾ ಅವಧಿಯಲ್ಲಿ ನಿಮ್ಮ ಸಂಘ ಸಂಸ್ಥೆಗಳ ಮೀಟಿಂಗು ಸಭೆಗಳನ್ನು ಇಟ್ಟುಕೊಳ್ಳಿ. ಶಾಲಾ ಅವಧಿಯಲ್ಲಿ ಶಿಕ್ಷಕರು ಸರಿಯಾದ ಸಮಯಕ್ಕೆ ಹಾಜರಾಗದಿದ್ದರೆ ತಾಲೂಕು ಎಸ್ ಡಿ ಎಂ ಸಿ ಸಂಘವು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಎಸ್ ಡಿ ಎಂ ಸಿ ಸಂಘದ ಕಾರ್ಯದರ್ಶಿ ಸತೀಶ್, ರಾಜ್ಯ ಸಂಘದ ನಿರ್ದೇಶಕ ರುದ್ರನಾಯ್ಕ ಸದಸ್ಯರಾದ ಲೋಹಿತ್, ಸಂತೋಷ್, ಚಂದ್ರಪ್ಪ ಉಪಸ್ಥಿತರಿದ್ದರು.