ಹುಣಸಘಟ್ಟ: ಭಾರತೀಯ ಮಹಿಳೆಯು ಹೊಲದಲ್ಲಿ ಕೆಲಸ ಮಾಡುವುದರಿಂದ ಹಿಡಿದು ವಿಮಾನ ನಡೆಸುವ ಮತ್ತು ಮೌಂಟ್ ಎವರೆಸ್ಟ್ ಶಿಖರ ಹತ್ತುವ ಮಟ್ಟಕ್ಕೆ ಇಂದು ಬೆಳೆದಿದ್ದಾರೆ ಎಂದು ಹೊನ್ನಾಳಿ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಮಹಾಂತೇಶ್ ಆರ್ ಪೂಜಾರ್ ಹೇಳಿದರು.
ಹೋಬಳಿ ಸಾಸ್ವೆಹಳ್ಳಿ ಕೋಟೆ ಆಂಜನೇಯ ಸಮುದಾಯ ಭವನದಲ್ಲಿ ಗ್ರಾಮ ಪಂಚಾಯ್ತಿ ಆಯೋಜಿಸಿದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಹಿಳಾ ಉದ್ಯೋಗ ಸಬಲೀಕರಣ ಅಭಿಯಾನ ಮತ್ತು ಮಹಿಳಾ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಈ ಮೊದಲು ಮಹಿಳೆಯರ ಜೀವನವು ಅವಳ ಮನೆಯ ನಾಲ್ಕು ಗೋಡೆಗಳಿಗೆ ಮಾತ್ರ ಸೀಮಿತವಾಗಿತ್ತು. ಮಕ್ಕಳನ್ನು ಹೇರುವುದು ಅವುಗಳ ಲಾಲನೆ ಪಾಲನೆ ಮಾಡುವುದು ಮತ್ತು ಕುಟುಂಬವನ್ನು ನೋಡಿಕೊಳ್ಳುವುದು ಅವಳ ಕೆಲಸವಾಗಿತ್ತು. ಆದರೆ ಈಗ ಕಾಲ ಬದಲಾಗುತ್ತಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ಮುನ್ನುಗುತ್ತಿದ್ದಾರೆ. ಅವರ ಈ ಸಾಧನೆಗೆ ಶಿಕ್ಷಣ ಪ್ರಮುಖ ಕಾರಣವಾಗಿದೆ. ಮಹಿಳೆಯರು ಸಂಘಟಿತ, ಆಸಂಘಟಿತ, ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೈಗಾರಿಕೆಗಳಲ್ಲಿ ಪ್ರವೇಶಿಸಿ ತಮ್ಮ ಪ್ರತಿಭೆ ಮೆರೆಯುತ್ತಿದ್ದಾರೆ. ಸರ್ಕಾರವು ಹಿಂದುಳಿದ ವರ್ಗದ ಮಹಿಳೆಯರಿಗಾಗಿ ವಿಶೇಷ ಸವಲತ್ತುಗಳನ್ನು ಮತ್ತು ಮೀಸಲಾತಿ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದೆ ಎಂದರು.
ಗ್ರಾಮ ಪಂಚಾಯಿತಿ ಪಿಡಿಒ ಪರಮೇಶ್ವರ್ ಮಾತನಾಡಿ ಕೂಲಿ ಕಾರ್ಮಿಕರು ಇದುವರೆಗೂ ಯಾರು ಪಂಚಾಯಿತಿಯಲ್ಲಿ ಉದ್ಯೋಗ ಕಾರ್ಡು ಮಾಡಿಸಿರುವುದಿಲ್ಲ ಅಂತವರು ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಕಾರ್ಡು ಮಾಡಿಸುವಂತೆ ಹಾಗೂ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ನರೇಗಾ ಯೋಜನೆಯಡಿ ಅವಕಾಶವಿದ್ದು ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳುವರು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಸವಿತಾ ವಹಿಸಿ ಮಾತನಾಡಿದರು ಅಂಗನವಾಡಿ ಮೇಲ್ವಿಚಾರಕಿ ಮಂಜುಳಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಾಂತ ಕೃಷ್ಣಮೂರ್ತಿ, ಸದಸ್ಯರುಗಳಾದ ಶಾಂತಮ್ಮ, ಸೌಮ್ಯ, ಅಶ್ವಿನಿ, ಇಂದ್ರಮ್ಮ, ರೇಣುಕಾ, ಸುಲೇಮಾನ್ ಖಾನ್ ಸಂಜೀವಿನಿ ಸಂಘದ ಮಹಿಳಾ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.