ದಾವಣಗೆರೆ, ಡಿ.07 : ಜಿಲ್ಲೆಯಲ್ಲಿ ದಡಾರ ಹಾಗೂ ರುಬೆಲ್ಲಾ ಲಸಿಕೆಗಳನ್ನು ಹೆಚ್ಚಿಸುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಲ್ಲಿ ದಡಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ದಡಾರ ಲಸಿಕಾ ಅಭಿಯಾನದ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದರು.
ದಡಾರ ಹಾಗೂ ರುಬೆಲ್ಲ ಲಸಿಕೆಯ ಎರಡನೆ ಡೋಸ್ ನೀಡಿಕೆ ಪ್ರಮಾಣ ಜಿಲ್ಲೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದೆ. ಈ ಪ್ರಮಾಣ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಆರೋಗ್ಯಾಧಿಕಾರಿಗಳು ವಿಶೇಷ ಗಮನ ಹರಿಸಿ ಎಂದು ಸೂಚಿಸಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಖಾಸಗಿ ಬಾಲವಾಡಿಗಳ ಜೊತೆ ಕೈಜೋಡಿಸಿ ಲಸಿಕೆ ಪಡೆಯದ ಮಕ್ಕಳನ್ನು ಗುರುತಿಸಬೇಕು. ಲಸಿಕೆ ಹಾಕುವ ಕುರಿತಂತೆ ಗ್ರಾಮಗಳಲ್ಲಿ ಡಂಗುರ ಹಾಗೂ ನಗರ ವ್ಯಾಪ್ತಿಯ ಹಾಗೂ ನಗರಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳ ಮೂಲಕ ಆಡಿಯೋ ಪ್ರಚಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವ ಆರೋಗ್ಯ ಸಂಘಟನೆಯ ಸಲಹಾ ವೈದ್ಯ ಡಾ. ಶ್ರೀಧರ್ ಮಾತನಾಡಿ, ದಡಾರ ರೋಗಕ್ಕೆ ಎರಡು ವರ್ಷಗಳಲ್ಲಿ ಎರಡು ಲಸಿಕೆ ನೀಡಬೇಕು. ಎರಡನೇ ಲಸಿಕೆ ಪಡೆಯದ ಮಕ್ಕಳಿಗೆ ಐದು ವರ್ಷದವರೆಗೂ ಅವಕಾಶ ಇರುತ್ತದೆ ಎಂದು ತಿಳಿಸಿದರು.
ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, ದಾವಣಗೆರೆ ನಗರದ ಹಳೆಯ ಭಾಗದಲ್ಲಿ ಲಸಿಕೆ ಪಡೆಯದವರ ಸಂಖ್ಯೆ ಹೆಚ್ಚಾಗಿದೆ. ಈ ಭಾಗದಲ್ಲಿ ಲಸಿಕೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಗಳೂರಿನಲ್ಲಿ ದಡಾರ ಹಾಗೂ ರುಬೆಲ್ಲಾ ಸಮೀಕ್ಷೆಗೆ ಹೆಚ್ಚು ಪ್ರಕರಣಗಳ ಪರೀಕ್ಷೆ ನಡೆಸಿದ ಜಗಳೂರು ತಾಲ್ಲೂಕು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಜಯಕುಮಾರ್ ಅವರಿಗೆ ಸನ್ಮಾನಿಸಲಾಯಿತು. ಡಿಡಿಪಿಐ ತಿಪ್ಪೇಶಪ್ಪ ಹಾಗೂ ಆರೋಗ್ಯ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.