ಹುಣಸಘಟ್ಟ: ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ನವ ಸಮಾಜದ ನಿರ್ಮಾಣದಲ್ಲಿ ರಂಗಭೂಮಿ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಸಿಎಂ ಆಪ್ತ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದರು.
ಸಾಸ್ವೇಹಳ್ಳಿ ಹೋಬಳಿ ವ್ಯಾಪ್ತಿಯ ಹನಗವಾಡಿ ಗ್ರಾಮದಲ್ಲಿ ಮಹೇಶ್ವರ ಸ್ವಾಮಿ ಜಾತ್ರೆ ಅಂಗವಾಗಿ ಶ್ರೀ ವೇಣುಗೋಪಾಲ ಕಲಾ ನಾಟ್ಯ ಸಂಘ ಹನಗವಾಡಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಸಂಯುಕ್ತ ಆಶ್ರಯದಲ್ಲಿ ಕಲಿಯುಗದಲ್ಲಿ ಘರ್ಜಿಸಿದ ಕರಣಾರ್ಜುನ ನಾಟಕದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಾಟಕಗಳು ಸಮಾಜದಲ್ಲಿನ ವಿದ್ಯಾಮಾನಗಳನ್ನು ಪ್ರತಿಬಿಂಬಿಸುತ್ತದೆ. ಹನಗವಾಡಿ ಗ್ರಾಮ ಕಲಾವಿದರ ಬೀಡು ಇಲ್ಲಿನ ಹವ್ಯಾಸಿ ಕಲಾವಿದರು ರಂಗಭೂಮಿಯನ್ನು ಪೋಷಿಸಿಕೊಂಡು ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಚಿಂತನಾಪರ ಅವರ ನಾಟಕಗಳನ್ನು ನೋಡಿದರೆ ಬದುಕಿನಲ್ಲಿ ಬದಲಾವಣೆ ಹೊಂದಲು ಸಾಧ್ಯವಾಗುತ್ತದೆ. ಇಂದಿನ ಆಧುನಿಕ ಸಿನಿಮಾ ಟಿವಿ ಸೀರಿಯಲ್ ಹಾವಳಿಯ ಭರಾಟೆಯಲ್ಲಿ ಈ ಗ್ರಾಮದ ಹಿರಿಯರು ನಾಟಕದ ಕಲೆಯನ್ನು ಜೀವಂತವಾಗಿ ಉಳಿಸಿಕೊಂಡು ಬಂದಿರುವುದು ಶ್ಲಾಘನಿಯ ಎಂದರು.
ಮಾಜಿ ಶಾಸಕ ಡಿಜಿ ಶಾಂತನಗೌಡ್ರು ಮಾತನಾಡಿ ನಾಟಕಗಳು ಕೇವಲ ಮನರಂಜನೆಯಲ್ಲ. ಅವುಗಳು ಪ್ರಸ್ತುತ ಸಮಾಜದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತವೆ. ಸ್ವಾತಂತ್ರ್ಯ ಪೂರ್ವದಿಂದಲೂ ಯಾವುದಾದರೂ ಗ್ರಾಮದಲ್ಲಿ ನಾಟಕ ಕಲೆ ಉಳಿದುಕೊಂಡು ಬಂದಿದೆ ಎಂದರೆ ಅದು ಹನಗವಾಡಿ ಗ್ರಾಮದಲ್ಲಿ. ಈಗ 75ನೇ ವರ್ಷದ ಅಮೃತ ಮಹೋತ್ಸವ ಆಚರಣೆ ನಡೆಯುತ್ತಿದೆ, ಮುಂದೆ ಶತಮಾನೋತ್ಸವವನ್ನು ಆಚರಣೆ ಅದ್ದೂರಿಯಾಗಿ ನೆರವೇರಲಿ ಎಂದು ಆಶಿಸಿದರು.
ಗ್ರಾಮದ ಹಿರಿಯ ಕಲಾವಿದ ಕಾನಪ್ಪನವರು ಮಾತನಾಡಿ ನಮ್ಮ ಗ್ರಾಮ ಎಲ್ಲಾ ವಿಚಾರದಲ್ಲೂ ಅಭಿವೃದ್ಧಿಯಾಗಿದೆ. ಆದರೆ ಬಡ ಜನರಿಗೆ ಜಮೀನು ರಹಿತ ಕೂಲಿಕಾರ್ಮಿಕರ ವರ್ಗಕ್ಕೆ ಶವ ಸಂಸ್ಕಾರಕ್ಕೆ ಜಾಗದ ಕೊರತೆ ಇದ್ದು ಇಲ್ಲಿನ ಜನರು ಗ್ರಾಮದಲ್ಲಿ ಯಾರಾದರೂ ಮರಣ ಹೊಂದಿದರೆ ತುಂಗಭದ್ರಾ ನದಿಯ ತೀರದಲ್ಲಿ ಶವಸಂಸ್ಕಾರ ಮಾಡಲಾಗುತ್ತದೆ ಮಳೆಗಾಲದಲ್ಲಿ ಅಂತ್ಯಸಂಸ್ಕಾರಕ್ಕೆ ಜನರು ಪರದಾಡಬೇಕಾಗುತ್ತದೆ. ಶಾಸಕರು ಆದಷ್ಟು ಬೇಗ ಗ್ರಾಮದ ಜನರಿಗೆ ಸ್ಮಶಾನದ ಜಾಗದ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಂಪಂ ಅಧ್ಯಕ್ಷ ಸುನಿತಾ ವಹಿಸಿದ್ದರು. ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್ಎ ಗದ್ಗೇಶ್, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್, ಶಾಂತರಾಜ್ ಪಾಟೀಲ್, ಉಪತಹಸಿಲ್ದಾರ್ ಚಂದ್ರಪ್ಪ ಮಾತನಾಡಿದರು. ವೇಣುಗೋಪಾಲ ನಾಟ್ಯಕಲಾ ಸಂಘದ ಅಧ್ಯಕ್ಷರು, ಗ್ರಾಮ ಪಂಚಾಯಿತಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.