ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಜಿಲ್ಲಾಡಳಿತದಿಂದ ಇದೇ ಜ. 26 ರಂದು 74 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣ ಆಚರಣೆಗೆ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿವಾನದ ಕಾಪಾಶಿ ಅವರು ಸೂಚನೆ ನೀಡಿದರು.
ಗಣರಾಜ್ಯೋತ್ಸವ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗದಿ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹಬ್ಬವಾಗಿರುವ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ದೇಶದ ಗಣರಾಜ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು ನೆನೆಯುವ ದಿನ ಇದಾಗಿದೆ. ಅವರ ಶ್ರಮ, ತ್ಯಾಗ, ಬಲಿದಾನಗಳಿಗೆ ನಾವು ಆದರಪೂರ್ವಕವಾಗಿ ಗೌರವ ಸಮರ್ಪಿಸೋಣ ಎಂದರು.
ಜನವರಿ 26 ರ ಬೆಳಿಗ್ಗೆ 09 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಲಿದೆ. ಎಲ್ಲಾ ಇಲಾಖಾ ಮುಖ್ಯಸ್ಥರು ತಮ್ಮ ತಮ್ಮ ಕಚೇರಿಗಳಲ್ಲಿ ನಿಯಮಾನುಸಾರ ಧ್ವಜಾರೋಹಣ ನೆರೆವೇರಿಸಿ ಬೆಳಿಗ್ಗೆ 8.30 ರೊಳಗಾಗಿ ಕ್ರೀಡಾಂಗಣದಲ್ಲಿ ಹಾಜರಿರಬೇಕು. ಸಮಾರಂಭದಲ್ಲಿ ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಪಾಲ್ಗೊಳಬೇಕು. ಅಂದು ಸರ್ಕಾರದ ಎಲ್ಲ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಸಮಾರಂಭದಲ್ಲಿ ಹಾಜರಿರಬೇಕು. ಕೋವಿಡ್ ನಿಯಂತ್ರಣ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಂಡು ಸಮಾರಂಭ ಜರುಗಿಸಲು ವ್ಯವಸ್ಥೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಪಥ ಸಂಚಲನದಲ್ಲಿ ಶಾಲಾ ಮಕ್ಕಳು, ಪೊಲೀಸ್, ಅರಣ್ಯ, ಅಗ್ನಿಶಾಮಕ ಇಲಾಖೆಗಳ ಜೊತೆಗೆ ಗೃಹರಕ್ಷಕ ದಳದ ತಂಡಗಳು ಪಾಲ್ಗೊಳ್ಳಲಿವೆ. ಕಾರ್ಯಕ್ರಮ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಅಸಾಧಾರಣ ಸಾಧನೆ ಮಾಡಿದ ಜಿಲ್ಲೆಯ ಮಕ್ಕಳಿಗೆ ಸರ್ಕಾರದಿಂದ ನೀಡಲಾಗುವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಶಿಕ್ಷಣ ಇಲಾಖೆ ನೋಡಿಕೊಳ್ಳಬೇಕು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸಾಂಸ್ಕøತಿಕ ಕಾರ್ಯಕ್ರಮ ನೀಡುವ ಮತ್ತು ಪೆರೇಡ್ನಲ್ಲಿ ಭಾಗವಹಿಸುವ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಒದಗಿಸಬೇಕು ಎಂದು ಸೂಚಿಸಿದರು.
ಪ್ಲಾಸ್ಟಿಕ್ ನಿಷೇಧ: ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಧ್ವಜ ಮತ್ತು ಪ್ಲಾಸ್ಟಿಕ್ ಹೂಗುಚ್ಚಗಳನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಇಡೀ ಕಾರ್ಯಕ್ರಮದ ಮೇಲುಸ್ತುವಾರಿಯನ್ನು ಅಪರ ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿ, ತಹಶೀಲ್ದಾರರು, ಪೊಲೀಸ್ ಉಪ ಅಧೀಕ್ಷಕರು, ಮಹಾನಗರಪಾಲಿಕೆ ಆಯುಕ್ತರು ನೋಡಿಕೊಂಡು ಕಾರ್ಯಕ್ರಮ ಅರ್ಥಪೂರ್ಣಗೊಳಿಸಲು ಸಹಕರಿಸಬೇಕು ಎಂದರು.
ದೀಪಾಲಂಕಾರ: ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳಿಗೆ, ನಗರದ ಪ್ರಮುಖ ವೃತ್ತಗಳಿಗೆ ಸಂಬಂಧಪಟ್ಟ ಇಲಾಖೆಗಳು ದೀಪಾಲಂಕಾರ ಮಾಡಿಸಬೇಕು. ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಧ್ವಜ ಸಂಹಿತೆ ಕಾಪಾಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ಎಲ್ಲಾ ಶಾಲೆಗಳಲ್ಲಿ 7.30 ಕ್ಕೆ ಧ್ವಜಾರೋಹಣ ನೆರವೇರಿಸಬೇಕು ಎಂದರು.
ಪ್ರತೀ ವರ್ಷದಂತೆ ಈ ವರ್ಷವೂ ಕಾರ್ಯಕ್ರಮವನ್ನು ನಿಗದಿಪಡಿಸಿದ ಇಲಾಖೆಯವರು ತಮಗೆ ವಹಿಸಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಹಾಗೂ ಪ್ರಮುಖ ಖಾಸಗಿ ಕಚೇರಿಗಳ ಮೇಲೆ ಜ.25 ಮತ್ತು 26 ರಂದು ವಿದ್ಯುತ್ ದೀಪಾಲಂಕಾರ ಮಾಡಿಸಬೇಕು.
ಕಾರ್ಯಕ್ರಮಕ್ಕೆ ಪೂರಕವಾಗಿ ಮಹಾನಗರಪಾಲಿಕೆಯವರು ವೇದಿಕೆ ನಿರ್ಮಾಣ, ಕುರ್ಚಿ, ಶಾಮಿಯಾನ, ಧ್ವನಿ ವರ್ಧಕ, ಕಾರ್ಪೆಟ್ ವ್ಯವಸ್ಥೆ ಮಾಡಬೇಕು. ತೋಟಗಾರಿಕೆ ಇಲಾಖೆಯವರು ವೇದಿಕೆ ಮುಂಭಾಗ ಹೂ ಅಲಂಕಾರ ಮತ್ತು ಹೂವಿನ ಕುಂಡಗಳನ್ನು ಇರಿಸಬೇಕು. ಅಲ್ಲದೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಶಿಸ್ತಿನಿಂದ ನಿರ್ವಹಿಸುವ ಮೂಲಕ ಗಣರಾಜ್ಯೋತ್ಸವವನ್ನು ಯಶಸ್ವಿಗೊಳಿಸಬೇಕೆಂದರು ಎಂದರು.
ಅಂದಿನ ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮವು ಕುವೆಂಪು ಕನ್ನಡ ಭವನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ವೇದಿಕೆ ನಿರ್ಮಾಣ, ಆಸನದ ವ್ಯವಸ್ಥೆ, ಧ್ವನಿ ವರ್ಧಕ, ವಿದ್ಯುತ್ ಪೂರೈಕೆಯ ಕುರಿತು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು, ಕಾರ್ಯಪಾಲಕ ಅಭಿಯಂತರರು ಸಂಪೂರ್ಣ ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ಡಿಡಿಪಿಐ ತಿಪ್ಪೇಶಪ್ಪ, ಮಹಾನಗರ ಪಾಲಿಕೆ ಆಯುಕ್ತ ರೇಣುಕಾ, ಡಿಹೆಚ್ಓ ಡಾ.ನಟರಾಜ, ಆಹಾರ ಮತ್ತು ನಾಗರೀಕ ಸರಬರಾಜು ಉಪ ನಿರ್ದೇಶಕಿ ನಜ್ಮಾ.ಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಸಹಾಯಕ ನಿರ್ದೇಶಕ ರವಿಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.