ದಾವಣಗೆರೆ.ಮಾ.16: ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಅಂಗವಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಮತದಾರರಿಗೆ ಮತಯಂತ್ರಗಳ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ತಿಳಿಸಿದರು.
ನಗರದ ಪ್ರೆಸ್ ಕ್ಲಬ್‍ನಲ್ಲಿ ಗುರುವಾರ ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂಬರುವ ವಿಧಾನಸಭಾ ಚುನಾವಣೆ -2023ರ ಸಿದ್ದತೆಗಳ ಕುರಿತಂತೆ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು ಈಗಾಗಲೇ ಜಿಲ್ಲೆಯಲ್ಲಿ ಜ್ಯೂಡಿಷಿಯಲ್ ಅಧಿಕಾರಿಗಳಿಗೆ, ಬಾರ್ ಅಸೋಷಿಯನ್ ಸದಸ್ಯರಿಗೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿಗೆ ಮತದಾನ ಹಾಗೂ ಮತಯಂತ್ರಗಳ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಇಂದು ಮಾಧ್ಯಮದವರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಏಳು ಮತಕ್ಷೇತ್ರಗಳಿದ್ದು, 1683 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಎರಡು ಹೆಚ್ಚುವರಿ ಮತಗಟ್ಟೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕಾರ್ಯ ನಿರಂತರವಾಗಿ ಪ್ರಗತಿಯಲಿದೆ. ಜಿಲ್ಲೆಯಲ್ಲಿ 7,13,136 ಪುರುಷ, 7,09,951 ಮಹಿಳಾ ಹಾಗೂ ಇತರೆ 117 ಮತದಾರರು ಸೇರಿ 14,23,203 ಮತದಾರಿದ್ದಾರೆ. ಇದಾರೊಂದಿಗೆ 471 ಸೇವಾ ಮತದಾರರು ಸೇರಿ ಒಟ್ಟಾರೆ 14,23,474 ಮತದಾರರು ಇರುವುದಾಗಿ ಮಾಹಿತಿ ನೀಡಿದರು.
ಈ ಪೈಕಿ 19,215 ವಿಶೇಷ ಚೇತನರು, 1,112 ಹಾಲಿ, ಮಾಜಿ ಸಂಸದರು, ಸಚಿವರು, ಶಾಸಕರನ್ನು ಗುರುತಿಸಲಾಗಿದೆ. 18 ರಿಂದ 19 ವರ್ಷ 28,639 ಯುವ ಮತದಾರರು, 80 ವರ್ಷ ಮೇಲ್ಪಟ್ಟ 27,513 ಮತದಾರರು, 90 ವರ್ಷ ಮೇಲ್ಪಟ್ಟ 4009 ಮತದಾರರು, 100 ವರ್ಷ ಮೇಲ್ಪಟ್ಟ 213 ಶತಾಯುಷಿ ಮತದಾರರನ್ನು ಗುರುತಿಸಲಾಗಿದೆ. ಎಂದು ತಿಳಿಸಿದರು.
ಭಾರತ ಚುನಾವಣಾ ಆಯೋಗ ಪ್ರಥಮ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಈಗಾಗಲೇ 80 ವರ್ಷ ಮೇಲ್ಪಟ್ಟ ಮತದಾರರ ಮನೆಗೆ ಬಿಎಲ್‍ಒಗಳು ಭೇಟಿ ನೀಡಿ ಮಾಹಿತಿ ನೀಡಿದ್ದಾರೆ. ಮತದಾನದ ದಿನ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಪೊಲೀಸ್ ಸಿಬ್ಬಂದಿ ಮನೆಗೆ ಕಳುಹಿಸಿ ಪಾರದರ್ಶಕ ಮಾಡಲು ಕ್ರಮವಹಿಸಲಾಗಿದೆ. ಚುನಾವಣಾ ಅಧಿಸೂಚನೆ ಪ್ರಕಟವಾದ 5 ದಿನಗಳ ಒಳಗಾಗಿ 11ಬಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಈಲ್ಲೆಯಲ್ಲಿ 27 ಸಾವಿರ 80 ವರ್ಷಕ್ಕೂ ಅಧಿಕ ವಯೋಮಾನದ ಮತದಾರರನ್ನು ಪಟ್ಟಿ ಮಾಡಲಾಗಿದೆ. ಇದಲ್ಲದೇ ತೀವ್ರ ಅನಾರೋಗ್ಯ ಪೀಡಿತರು ವಿಶೇಷ ಚೇತನರು ಹಾಗೂ ಕೋವಿಡ್‍ನಿಂದ ಬಾಧಿತರು ಮನವಿ ಮಾಡಿಕೊಂಡರೆ ಮನೆಯಲ್ಲಿ ಆಯೋಗದ ನಿಯಮಾನುಸಾರ ಮತದಾನಕ್ಕೆ ಅವಕಾಶ ಮಾಡಿಕೊಡಲಾಗುವುದು. ಮಿಲ್ಟರಿ ಅವರಿಗೆ ಹಾಗೂ ಸರ್ಕಾರಿ ನೌಕರರಿಗೆ ಮಾತ್ರ ಪೋಸ್ಟ್ ಬ್ಯಾಲ್ ಅವಕಾಶವಿದೆ ಎಂದರು.
ವಿವಿಧ ತಂಡ ರಚನೆ: ಜಿಲ್ಲಾ ವೆಚ್ಚ ಮೇಲ್ವಿಚಾರಣಾ ಕೋಶ, ಜಿಲ್ಲಾ ವೆಚ್ಚ ನಿಗಾ ಸಮಿತಿ, ಜಿಲ್ಲಾ ಮಾದರಿ ನೀತಿ ಸಂಹಿತೆ ಕೋಶ, ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಕೋಶ ಸೇರಿದಂತೆ 15 ತಂಡಗಳನ್ನು ರಚಿಸಲಾಗಿದೆ.
ಅಧಿಕಾರಿಗಳ ನೇಮಕ: 164 ಸೆಕ್ಟರ್ ಅಧಿಕಾರಿಗಳು, 63 ಫ್ಲೈಯಿಂಗ್ ಸ್ಕ್ವಾಡ್ ತಂಡ, 123 ಸ್ಟ್ಯಾಟಿಕ ಸರ್ವೇಲೆನ್ಸ್ ತಂಡ ನೇಮಕ ಮಾಡಲಾಗಿದೆ. 41 ಚೆಕ್ ಪೋಸ್ಟ್ ಗುರುತಿಸಲಾಗಿದೆ. 15 ವಿಡಿಯೋ ಸರ್ವಲನ್ಸ್ ತಂಡ ರಚನೆ ಮಾಡಲಾಗಿದೆ.
ಬ್ಯಾನರ್ ಬಂಟಿಂಗ್ಸ್ ತೆರವು: ಚುನಾವಣೆ ನೀತಿ ಸಂಹಿತೆ ಜಾರಿಯಾಗದಿದ್ದರೂ ಜಿಲ್ಲೆಯಲ್ಲಿ ಇತರೆ ಕಾನೂನಿನ ಅನ್ವಯ ಅನಧಿಕೃತ ಚಟುವಟಿಕೆಗಳ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯ ನಗರ ಪಟ್ಟಣ ಪ್ರದೇಶಗಳಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಗುತ್ತಿದೆ. ದಾವಣಗೆರೆ, ಹರಿಹರ, ಚನ್ನಗಿರಿ, ಮಲೆಬೆನ್ನೂರು ಸೇರಿದಂತೆ ಪಟ್ಟಣ ಪ್ರದೇಶಗಳಲ್ಲಿ ಅನುಮತಿ ಇಲ್ಲದ ಹಾಕಲಾದ ಹೋರ್ಡಿಂಗ್ಸ್, ಬ್ಯಾನರ್, ಬಂಟಿಂಗ್ಸ್‍ಗಳ ತೆರವಿಗೆ ನಿರ್ದೇಶನ ನೀಡಲಾಗಿದೆ. ಈವರೆಗೆ 16 ವಾಲ್‍ಪೇಂಟ್, 244 ಪೋಸ್ಟರ್ಸ್, 117 ಬ್ಯಾನರ್ಸ್ ಸೇರಿ 509 ಪ್ರಚಾರ ಫಲಕಗಳನ್ನು ತೆರವು ಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಕ್ರಮ ಮದ್ಯ ವಶ: ಮಾರ್ಚ್ 6 ರಿಂದ 15ರವರೆಗೆ ವಿವಿಧ ಕಡೆಗಳಲ್ಲಿ ದಾಳಿಮಾಡಿ ಅನುಮತಿ ಇಲ್ಲದೆ ಮಾರಾಟ ಮಾಡುತ್ತಿದ್ದ 122 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನಿಂತಿ ಸಂಹಿತೆ ಜಾರಿಯಾಗಿಲ್ಲವಾದರೂ ಸಹ ಸಾಮಾನ್ಯವಾಗಿ ಸಾರ್ವಜನಿಕರಿಗೆ ಹಂಚಲು ಸಂಗ್ರಹಿಸಲಾಗುತ್ತಿರುವ ಟಿವಿ, ಫ್ರೆಸರ್ ಕುಕ್ಕರ್, ಸಾರಿ ಸೇರಿದಂತೆ ವಿವಿಧ ವಸ್ತುಗಳ ಕುರಿತು ನಿಗಾವಹಿಸಲಾಗುತ್ತಿದೆ. ನಾನೇ ಖುದ್ದಾಗಿ ಅನೇಕ ಕಡೆ ಭೇಟಿ ನೀಡಿದ್ದೇನೆ. ಈವರೆಗೆ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಅಕ್ರಮಗಳ ಬಗ್ಗೆ ಮಾಹಿತಿ ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದರು.
ಪ್ರಾತ್ಯಕ್ಷಿಕೆ: ವಿದ್ಯುನ್ಮಾನ ಮತಯಂತ್ರಗಳ ಬಳಕೆ ಕುರಿತಂತೆ ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಅವರು ಪ್ರಾತ್ಯಕ್ಷಿತೆ ನಡೆಸಿಕೊಟ್ಟರು. ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿ ಪ್ಯಾಟ್ ಸೇರಿದಂತೆ ಮತ ಯಂತ್ರಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಮತದಾನ ಪ್ರಕ್ರಿಯೆ ಮಾಹಿತಿ ನೀಡಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ.ಬಿ.ಆರ್ ರಂಗನಾಥ್, ಜಿಲ್ಲಾ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಏಕಾಂತಪ್ಪ, ಚುನಾವಣಾ ತಹಶೀಲ್ದಾರ್ ಅರುಣ್ ಕಾರಗಿ, ಚುನಾವಣಾ ಶಿರಸ್ತೆದಾರ್ ಕುಮಾರ್ ಇತರರು ಉಪಸ್ಥಿತಿರಿದ್ದರು.