ನ್ಯಾಮತಿ : ನ್ಯಾಮತಿ ಪಟ್ಟಣಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡ ಬೇಕಾಗಿದ್ದು ನನ್ನ ಕರ್ತವ್ಯ, ಈ ನಿಟ್ಟಿನಲ್ಲಿ ನಾನು ಕಾರ್ಯೋನ್ಮುಕನಾಗಿ ಕೆಲಸ ಮಾಡುತ್ತಿದ್ದೇನೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ಪಟ್ಟಣದಲ್ಲಿ 44 ಕೋಟಿ ರೂ.ವೆಚ್ಚದ ನೀರು ಸರಬರಾಜು ಯೋಜನೆ ಹಾಗೂ 30.61 ಕೋಟಿ ರೂ. ವೆಚ್ಚದ ಒಳಚರಂಡಿ ಕಾಮಗಾರಿ ಸೇರಿ ಒಟ್ಟು 74.61 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮಾತು ಸಾಧನೆಯಾಗ ಬಾರದು, ಸಾಧನೆ ಮಾತಾಗ ಬೇಕು, ಈ ನಿಟ್ಟಿನಲ್ಲಿ ನಾನು ಅವಳಿ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದು, ಅವಳಿ ತಾಲೂಕಿನ ಪ್ರತಿಯೊಂದು ಹಳ್ಳಿಗಳನ್ನು ಅಭಿವೃದ್ದಿ ಮಾಡಿದ್ದು, ಸಂಪೂರ್ಣ ಧೂಳು ಮುಕ್ತ ಗ್ರಾಮಗಳನ್ನಾಗಿ ಮಾಡಿದ್ದು, ರಾಜ್ಯದಲ್ಲೇ ಅವಳಿ ತಾಲೂಕುಗಳನ್ನು ಮಾದರಿ ತಾಲೂಕು ಮಾಡುತ್ತೇನೆಂದರು.
ನ್ಯಾಮತಿ ಪಟ್ಟಣಕ್ಕೆ ಸಮಗ್ರ ಶುದ್ದ ಕುಡಿಯುವ ನೀರು ನೀಡುವ ನಿಟ್ಟಿನಲ್ಲಿ 44 ಕೋಟಿ ರೂ. ವೆಚ್ಚದಲ್ಲಿ ನೀರು ಸರಬರಾಜು ಯೋಜನೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೇ ಅದೇ ರೀತಿ 30.61 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗುತ್ತಿದೇ ಎಂದರು.
ಈಗಾಗಲೇ ನ್ಯಾಮತಿ ಪಟ್ಟಣದಲ್ಲಿ ಅಲಂಕಾರಿಕ ವಿದ್ಯುತ್ ದೀಪಗಳ ಜೊತೆಗೆ, ಪಟ್ಟಣದ ಪ್ರತಿಯೊಂದು ರಸ್ತೆಗಳನ್ನು ಸಿಸಿ ರಸ್ತೆ ಮಾಡಿದಲಾಗಿದೆ ಎಂದ ಶಾಸಕರು, ನ್ಯಾಮತಿ ಪಟ್ಟಣದಲ್ಲಿ 6 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ, ಬಾಲಕಿಯರ ಸಂಯುಕ್ತ ಪದವಿ ಪೂರ್ವ ಕಾಲೇಜು ಕಟ್ಟಡಕ್ಕೆ 5 ಕೋಟಿ, ಪದವಿ ಕಾಲೇಜಿಗೆ 3 ಕೋಟಿ, ಕರ್ನಾಟಕ ಪಬ್ಲಿಕ್ ಶಾಲೆಗೆ 2 ಕೋಟಿ, ಪ್ರವಾಸಿ ಮಂದಿರ 4 ಕೋಟಿ ಜೊತೆಗೆ ನಗರೋತ್ತಾನ ಯೋಜನೆಯ ಮೂಲಕ 6 ಕೋಟಿ ಅನುದಾವನ್ನು ನ್ಯಾಮತಿ ಪಟ್ಟಣಕ್ಕೆ ಹಾಕಲಾಗಿದ್ದು ಸುಮಾರು 100 ಕೋಟಿಗೂ ಹೆಚ್ಚು ಅನುದಾನವನ್ನು ನ್ಯಾಮತಿ ಪಟ್ಟಣಕ್ಕೆ ಹಾಕಲಾಗಿದೆ ಎಂದರು.
ಈ ವೇಳೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಣೇಶ್ ರಾವ್, ಬಗರ್ಹುಕ್ಕುಂ ಕಮಿಟಿ ಅಧ್ಯಕ್ಷರಾದ ವೀರಣ್ಣ,ತಾ.ಪಂ ಮಾಜಿ ಅಧ್ಯಕ್ಷರಾದ ಎಸ್.ಪಿ.ರವಿಕುಮಾರ್, ಮುಖಂಡರಾದ ನಟರಾಜ್, ಸಿ.ಕೆ.ರವಿ, ಗಿರೀಶ್,ಬಿ.ಕೆ.ಕರಿಬಸಪ್ಪ, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸಿಬ್ಬಂಧಿಗಳು, ಗುತ್ತಿಗೆದಾರರಾದ ರವೀಶ್ ಸೇರಿದಂತೆ ಮತ್ತೀತತರಿದ್ದರು.