ದಾವಣಗೆರೆ; ಜೂನ್.12 : ಮಕ್ಕಳು ಸಮಾಜದ ಆಸ್ತಿ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದಲೇ ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನಗರದ ಮಿಲ್ಲತ್ ಮಹಾವಿದ್ಯಾಲಯದಲ್ಲಿ ಜರುಗಿದ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರಿಗೂ ಸಾಮಾಜಿಕ ನ್ಯಾಯ, ಬಾಲ ಕಾರ್ಮಿಕ ಪದ್ದತಿ ಕೊನೆಗಾಣಲಿ ಎಂಬ ಘೋಷಾವಾಕ್ಯದೊಂದಿಗೆ, ವಿಶ್ವದ ಅನೇಕ ಕಡೆ ಬಾಲ ಕಾರ್ಮಿಕ ಪದ್ದತಿ ಜಾರಿಯಲ್ಲಿದ್ದು ಭಾರತಕ್ಕೆ ಹೊಲಿಸಿದರೆ ಕರ್ನಾಟಕ ಮೊದಲನೇ ಸ್ಥಾನ ಪಡೆದಿದೆ. ಬಾಲ ಕಾರ್ಮಿಕ ಪದ್ಧತಿಯು ಭಾರತದಾದ್ಯಂತ ಶೇ.16 ರಿಂದ 9.6 ಇಳಿಕೆಯಾಗಿದೆ. ಕೋವಿಡ್ ಪರಿಣಾಮವಾಗಿ ಹಲವಾರು ಜನ ನಿರುದ್ಯೋಗಿಗಳಾಗಿದ್ದು ಆಗ ಬಾಲ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಿದೆ. ಎಲ್ಲಾ ಮಕ್ಕಳಿಗೂ ಶಿಕ್ಷಣ ಹಾಗೂ ಜೀವಿಸುವ ಹಕ್ಕಿದೆ ಎಂದರು.
ವಿದ್ಯಾರ್ಥಿಗಳು, ಅಧಿಕಾರಿಗಳು, ನೌಕರರು ಅಥವಾ ಸಾರ್ವಜನಿಕರಿಗೆ ಬಾಲ ಕಾರ್ಮಿಕರು ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಬಹುದು ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಜಿ.ಇಬ್ರಾಹಿಂ ಸಾಬ್ ಮಾತನಾಡಿ ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ, ಆ ದೇಶ ಬಾಲ ಕಾರ್ಮಿಕತೆಯಿಂದ ಮುಕ್ತವಾಗಿರಬೇಕು. ಕರ್ನಾಟಕದಲ್ಲಿ ಪ್ರತಿ 10 ಮಕ್ಕಳಲ್ಲಿ ಒಬ್ಬರಂತೆ ಬಾಲಕಾರ್ಮಿಕರಿದ್ದಾರೆ. ಇತ್ತಿಚೀನ ದಿನಗಳಲ್ಲಿ ಈ ಪದ್ಧತಿ ಕಡಿಮೆಯಾಗಿದೆ. ಈ ಅನಿಷ್ಟ ಪದ್ಧತಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಇಲಾಖೆಗಳಲ್ಲದೇ ಸಮಾಜವು ಕೈ ಜೋಡಿಸಬೇಕು ಎಂದರು.
18 ವರ್ಷದೊಳಗಿನವರು ಎಲ್ಲಾರೂ ಮಕ್ಕಳೇ, ಅವರಿಂದ ದುಡಿಸಿಕೊಳ್ಳುವುದು ಹಾಗೂ ಪೋಷಕರು ಅವರನ್ನು ಬೆಂಬಲಿಸುವುದು ಶಿಕ್ಷಾರ್ಹ ಅಪರಾಧ, ಮಕ್ಕಳು ಮೊಬೈಲ್ ಗೀಳಿಗೆ ಒಳಗಾಗದೇ ಶಿಕ್ಷಣದ ಕಡೆ ಗಮನಹರಿಸಬೇಕು ಎಂದರು.
ಜಾಗೃತಿ ಜಾಥಾ: ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಜಾಗೃತಿ ಮೂಡಿಸುವ ಜಾಥಾಗೆ ಜೆ.ಎಂ.ಎಫ್.ಸಿ ಹಾಗೂ ಜಿಲ್ಲಾ 3ನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ಅಪ್ತಾಬ್ ಮತ್ತು 1ನೇ ಹೆಚ್ಚುವರಿ ಸಿವಿಲ್ ನ್ಯಾಯಧೀಶರಾದ ಪ್ರಶಾಂತ್ ಜಿ.ಸಿ ಚಾಲನೆ ನೀಡಿದರು. ಮಕ್ಕಳಿಗೆ ಶಿಕ್ಷಣ ಕೊಡಿ ಶಿಕ್ಷೆ ಕೊಡಬೇಡಿ, ಇಂದಿನ ಮಕ್ಕಳೇ ನಾಳಿನ ದೇಶದ ಭವಿಷ್ಯ, ಬೆಳೆಯಲಿ ಶಿಕ್ಷಣದ ಮೊಗ್ಗು ಚಿಗುರಲಿ ಎಂಬ ಘೋಷವಾಕ್ಯಗಳನ್ನು ಕೂಗುತ್ತಾ ಭಾಷಾನಗರ, ಮಂಡಕ್ಕಿಬಟ್ಟಿ ಮೂಲಕ ಜಾಥಾವು ಮಿಲ್ಲತ್ ವಿದ್ಯಾಲಯದಲ್ಲಿ ಸಮಾಪನಗೊಂಡಿತು.
ಹೆಚ್ಚುವರಿ ಪೋಲಿಸ್ ಅಧೀಕ್ಷಕ ರಾಮಗೊಂಡ ಬಸರಗಿ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಈ. ಎನ್. ಪ್ರಸನ್ನಕುಮಾರ, ಶಿಕ್ಷಣಾಧಿಕಾರಿ ಅಂಬಣ್ಣ, ಆರೋಗ್ಯ ಇಲಾಖೆಯ ಮುರುಳಿಧರ್, ಮಿಲ್ಲತ್ ಮಹಾವಿದ್ಯಾಲಯದ ಆಡಳಿತಾಧಿಕಾರಿ ಸೈಯದ್ ಆಲಿ ಉಪಸ್ಥಿತರಿದ್ದರು.